ADVERTISEMENT

ಕೋರೆಗಾಂವ್ ಪ್ರಕರಣದೊಂದಿಗೆ ಸಂಬಂಧವಿಲ್ಲದಿದ್ದರೂ ಕಿರುಕುಳ: ಪ್ರೊ.ರೇ ಆರೋಪ

ಎನ್ಐಎ ವಿರುದ್ಧ ಐಐಎಸ್‌ಇಆರ್‌ನ ಪ್ರಾಧ್ಯಾಪಕ ಆರೋಪ

ಪಿಟಿಐ
Published 6 ಸೆಪ್ಟೆಂಬರ್ 2020, 11:55 IST
Last Updated 6 ಸೆಪ್ಟೆಂಬರ್ 2020, 11:55 IST

ಕೋಲ್ಕತ್ತ: ‘ಭೀಮಾ ಕೋರೆಗಾಂವ್ ಪ್ರಕರಣದೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ. ಆದರೂ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಇತರ ಬುದ್ಧಿಜೀವಿಗಳಂತೆ ನನಗೂ ಕಿರುಕುಳ ನೀಡುತ್ತಿದೆ’ ಎಂದು ಕೋಲ್ಕತ್ತದ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದ (ಐಐಎಸ್‌ಇಆರ್‌) ಪ್ರಾಧ್ಯಾಪಕ ಪ್ರೊ.ಪಾರ್ಥ ಸಾರಥಿ ರೇ ಭಾನುವಾರ ಆರೋಪಿಸಿದ್ದಾರೆ.

ಕೆಲ ದಿನಗಳ ಹಿಂದೆ ಭೀಮಾಕೋರೆಗಾಂವ್ ಪ್ರಕರಣ ಸಂಬಂಧದ ವಿಚಾರಣೆಗಾಗಿ ಪ್ರೊ.ಪಾರ್ಥ ಸಾರಥಿ ಅವರಿಗೆ ಎನ್‌ಐಎ ಸಮನ್ಸ್ ನೀಡಿತ್ತು.

ಕೋರೆಗಾಂವ್‌ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಸೆ. 10ಕ್ಕೆ ಮುಂಬೈನ ತನ್ನ ಕಚೇರಿಗೆ ಹಾಜರಾಗುವಂತೆ ಎನ್ಐಎ, ಪ್ರೊ.ಪಾರ್ಥ ಸಾರಥಿ ಅವರಿಗೆ ನೋಟಿಸ್ ಜಾರಿ ಮಾಡಿದೆ. ಕಿರುಕುಳಕ್ಕೊಳಗಾದ ಕೈದಿಗಳ ಸಂಘಟನಾ ಸಮಿತಿಯ (ಪಿಪಿಎಸ್‌ಸಿ) ಕೋಲ್ಕತ್ತಾ ವಿಭಾಗದ ಸಂಯೋಜಕರಾಗಿ ಪ್ರೊ.ಪಾರ್ಥ ಸಾರಥಿ ಕೆಲಸ ಮಾಡುತ್ತಿದ್ದಾರೆ.

ADVERTISEMENT

‘ನಾನು ಪುಣೆಯಲ್ಲಿರುವ ಭೀಮಾಕೋರೆಗಾಂವ್ ಸ್ಮಾರಕಕ್ಕೆ ಎಂದಿಗೂ ಭೇಟಿ ನೀಡಿಲ್ಲ ಮತ್ತು ನನ್ನ ವಿರುದ್ಧ ಯಾವುದೇ ಆರೋಪ ದಾಖಲಾಗಿಲ್ಲ’ ಎಂದೂ ಪ್ರೊ.ರೇ ಸ್ಪಷ್ಟಪಡಿಸಿದ್ದಾರೆ.

‘ಸೆಕ್ಷನ್ 160 ಸಿರ್‌ಪಿಸಿ ಅಡಿಯಲ್ಲಿ ಪ್ರಕರಣದ ಸಾಕ್ಷ್ಯವನ್ನಾಗಿ ಪರಿಗಣಿಸಿ ಎನ್‌ಐಎ ನನಗೆ ಸಮನ್ಸ್ ನೀಡಿದೆ. ನಾನು ಕೋರೆಗಾಂವ್‌ಗೆ ಹೋಗದ ಕಾರಣ ನನ್ನ ವಿರುದ್ಧ ಯಾವುದೇ ಆರೋಪಗಳಿಲ್ಲ. ಪತ್ರಿಕೆಗಳಲ್ಲಿ ಈ ವಿಚಾರ ಪ್ರಕಟವಾಗುವವರೆಗೂ ನನಗೆ ಕೋರೆಗಾಂವ್ ಪ್ರಕರಣದ ಬಗ್ಗೆ ಗೊತ್ತಿರಲಿಲ್ಲ’ ಎಂದು ಅವರು ಹೇಳಿದ್ದಾರೆ.

‘ಇದು ಭಾರತದಾದ್ಯಂತ ಶಿಕ್ಷಣ ತಜ್ಞರು ಮತ್ತು ಬುದ್ಧಿಜೀವಿಗಳಿಗೆ ನೀಡುತ್ತಿರುವ ಕಿರುಕುಳ ಮತ್ತು ಬೆದರಿಕೆಯೊಡ್ಡುವ ತಂತ್ರವಲ್ಲದೆ ಮತ್ತೇನು? ನಾನು ಜೀವ ವೈದ್ಯಕೀಯ ವಿಜ್ಞಾನಿಯಾಗಿದ್ದು ಕೋವಿಡ್‌–19 ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದಾನೆ. ಹಿಂದುಳಿದವರ ಮತ್ತು ದಮನಿತರ ಪರವಾಗಿ ನಾನು ಸ್ಥಿರವಾಗಿ ನಿಂತಿದ್ದೇನೆ. ಇಂಥ ನಿರ್ಣಾಯಕ ಸಮಯದಲ್ಲಿ ನನಗೆ ಈ ರೀತಿ ಕಿರುಕಳ ನೀಡುತ್ತಿರುವುದು ದುರದೃಷ್ಟಕರ’ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.