ಲುವಿವ್/ಕೀವ್: ಉಕ್ರೇನ್ ದೇಶದ ಮೇಲೆ ಮಿಲಿಟರಿ ಕಾರ್ಯಾಚರಣೆಯನ್ನು ತೀವ್ರಗೊಳಿಸುವುದಾಗಿ ರಷ್ಯಾ ಸೇನಾಧಿಕಾರಿಗಳು ಹೇಳಿರುವ ಬೆನ್ನಲ್ಲೆ,ಉಕ್ರೇನ್ ದೇಶದ ವಿದೇಶಾಂಗ ಸಚಿವಡಿಮಿಟ್ರೊ ಕುಲೆಬಾ ಅವರು 5 ವಾರಗಳಿಂದ ನಾನು ಮಕ್ಕಳನ್ನು ನೋಡಿಲ್ಲ ಎಂದು ಹೇಳಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಕಳೆದ 5 ತಿಂಗಳಿಂದ ನಾನು ಮನೆಯ ಸಂಪರ್ಕವನ್ನೇ ಬಿಟ್ಟಿದ್ದೇನೆ. 5 ವಾರಗಳಿಂದ ಮಕ್ಕಳನ್ನು ನೋಡಿಲ್ಲ. ಅವರ ಬಳಿ ಫೋನಿನಲ್ಲಿ ಎರಡು ಮೂರು ಸಲ ಮಾತನಾಡಿದ್ದೇನೆ. ಎರಡು ಸಾಕು ನಾಯಿಗಳನ್ನು ನೋಡಲು ಸಾಧ್ಯವಾಗಿಲ್ಲ ಎಂದು ಕುಲೆಬಾ ಹೇಳಿದ್ದಾರೆ.
ಇಲ್ಲಿಯವರೆಗೂ ರಷ್ಯಾ ವಿರುದ್ಧ ಸಾಕಷ್ಟು ಹೋರಾಡಲಾಗಿದೆ. ಇನ್ನು ಮುಂದೆಯೂ ಹೋರಾಟ ಮಾಡಬೇಕು.ನಾವು ನಮ್ಮ ಹಕ್ಕುಗಳಿಗಾಗಿ ಶ್ರಮಿಸುತ್ತಿದ್ದೇವೆ. ಈ ಯುದ್ಧದಲ್ಲಿ ನಾವು ಸೋಲುವುದಿಲ್ಲ ಎಂದು ಅವರು ಹೇಳಿದ್ದಾರೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಯುದ್ಧ ಟ್ಯಾಂಕರ್‌ಗಳು ಉಕ್ರೇನ್ ಪ್ರವೇಶಿಸಿ ಒಂದು ತಿಂಗಳಿಗಿಂತ ಹೆಚ್ಚು ಸಮಯವಾಗಿದೆ. ರಷ್ಯಾ ಆಕ್ರಮಣದ ನಡುವೆ ಆತಂಕಗೊಂಡ 1 ಕೋಟಿಗೂ ಅಧಿಕ ಜನ ಮನೆಗಳನ್ನು ತೊರೆದಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಮಾಹಿತಿ ನೀಡಿದ್ದಾರೆ.
ಯುದ್ಧದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಉಕ್ರೇನ್ ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.