ADVERTISEMENT

ಮ್ಯಾನ್ಮಾರ್‌ ಗಡಿಯಲ್ಲಿ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಜಾಲ ಸಕ್ರಿಯವಾಗಿದೆ: ಎನ್ಐಎ

ಮಣಿಪುರ, ಮಿಜೋರಾಂ ರಾಜ್ಯಗಳಲ್ಲಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 26 ಮೇ 2024, 14:22 IST
Last Updated 26 ಮೇ 2024, 14:22 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಗುವಾಹಟಿ: ಸಂಘರ್ಷ ಪೀಡಿತ ನೆರೆಯ ಮ್ಯಾನ್ಮಾರ್‌ಗೆ ಹೊಂದಿಕೊಂಡಿರುವ ಗಡಿಯಲ್ಲಿ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಮಾಡುವ ಜಾಲವೊಂದು ಸಕ್ರಿಯವಾಗಿದೆ. ಈ ಜಾಲವು ಮಣಿಪುರ ಮತ್ತು ಮಿಜೋರಾಂಗೆ ಶಸ್ತ್ರಾಸ್ತ್ರಗಳನ್ನು ಸಾಗಿಸಿ, ಸಂಗ್ರಹಿಸುತ್ತಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹೇಳಿದೆ.

ಕಳ್ಳಸಾಗಣೆ ಮೂಲಕ ಸಾಗಿಸಲಾಗುವ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿ ಹವಾಲಾ ಮಾರ್ಗದ ಮೂಲಕ ಹಣ ಪಾವತಿಸಲಾಗುತ್ತಿದೆ ಎಂಬುದು ಸಹ ತನಿಖೆ ವೇಳೆ ಗೊತ್ತಾಗಿದೆ ಎಂದು ಎನ್‌ಐಎ ತಿಳಿಸಿದೆ.

ADVERTISEMENT

ಮಿಜೋರಾಂ ರಾಜಧಾನಿ ಐಜ್ವಾಲ್‌ನಲ್ಲಿರುವ ಬಂದೂಕು ಮಾರಾಟ ಮಳಿಗೆ ಸೇರಿದಂತೆ 6 ಸ್ಥಳಗಳಲ್ಲಿ ಶನಿವಾರ ಶೋಧ ನಡೆಸಿದ್ದ ಎನ್‌ಐಎ, ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯಲ್ಲಿ ಪಾತ್ರ ಹೊಂದಿದ್ದಾನೆ ಎನ್ನಲಾದ ಸೋಲೊಮನ್‌ ಅಲಿಯಾಸ್‌ ಹಮಿಂಗಾ ಎಂಬಾತನನ್ನು ಬಂಧಿಸಿತ್ತು. ಈ ಕಾರ್ಯಾಚರಣೆ ಬೆನ್ನಲ್ಲೇ, ಎನ್‌ಐಎ ಈ ಕುರಿತು ಹೇಳಿಕೆ ನೀಡಿದೆ.

ಅಪಾರ ಪ್ರಮಾಣದ ಸ್ಫೋಟಕ ವಸ್ತು, ಡಿಜಿಟಲ್‌ ಸಾಧನಗಳು, ದಾಖಲೆಗಳು ಹಾಗೂ ಅಪರಾಧಕೃತ್ಯಗಳಿಗೆ ಬಳಸುವ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಎನ್‌ಐಎ ಶನಿವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ, ಮಿಜೋರಾಂನ ಲೈಗೈಹವ್ಮಾ ಎಂಬ ವ್ಯಕ್ತಿಯನ್ನು ಎನ್‌ಐಎ ಬಂಧಿಸಿತ್ತು.

‘ಕಚ್ಚಾ ಬಾಂಬ್‌ಗಳ ವಶ’: ಮಣಿಪುರದ ಪೂರ್ವ ಇಂಫಾಲ್‌ ಜಿಲ್ಲೆಯ ನಾಂಗ್ಡಾಮ್ ತಂಗ್‌ಖುಲ್‌ ಮತ್ತು ಈಥಮ್ ತಂಗ್‌ಖುಲ್‌ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಯಲ್ಲಿ ಹುದುಗಿಸಿ ಇಟ್ಟಿದ್ದ ಮೂರು ಕಚ್ಚಾ ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರಿಂದ ರಾಜ್ಯದಲ್ಲಿ ಸಂಭವಿಸಲಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದಂತಾಗಿದೆ ಎಂದು ಸೇನೆ ಭಾನುವಾರ ಹೇಳಿದೆ.

ಎರಡು ಕಚ್ಚಾಬಾಂಬ್‌ಗಳು ತಲಾ 2 ಕೆ.ಜಿ ಹಾಗೂ ಒಂದು ಕಚ್ಚಾ ಬಾಂಬ್‌ 5 ಕೆ.ಜಿ ತೂಕ ಹೊಂದಿದ್ದು, ಅವುಗಳನ್ನು ಬಾಂಬ್‌ ನಿಷ್ಕ್ರಿಯ ದಳ ಸಿಬ್ಬಂದಿ ನಿಷ್ಕ್ರಿಯಗೊಳಿಸಿದವು ಎಂದು ಸೇನೆಯ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.