ADVERTISEMENT

ಖಿನ್ನತೆಯಿಂದ ಬಳಲುತ್ತಿದ್ದ ವಿದ್ಯಾರ್ಥಿ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ

ಪಿಟಿಐ
Published 7 ಜುಲೈ 2024, 14:33 IST
Last Updated 7 ಜುಲೈ 2024, 14:33 IST
   

ಮುಂಬೈ: ‘ಖಿನ್ನತೆ ಹಾಗೂ ಅಂತರ್ಜಾಲ ಗೇಮಿಂಗ್‌ ಗೀಳಿನಿಂದ ಉಂಟಾದ ಮನೋರೋಗದ ಕಾರಣಕ್ಕಾಗಿ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲಾಗಲಿಲ್ಲ. ನಂತರ ನಡೆದ ಪೂರಕ ಪರೀಕ್ಷೆಯನ್ನೂ ಬರೆಯಲಾಗಲಿಲ್ಲ. ಆದ ಕಾರಣ, ಪರೀಕ್ಷೆ ಬರೆಯಲು ಮತ್ತೊಂದು ಅವಕಾಶ ನೀಡಬೇಕು’ ಎಂದು ಕೋರಿ 19 ವರ್ಷದ ವಿದ್ಯಾರ್ಥಿ ಮಾಡಿದ ಮನವಿಗೆ ಬಾಂಬೆ ಹೈಕೋರ್ಟ್‌ ಸಮ್ಮತಿ ಸೂಚಿಸಿದೆ.

ಬಾಂಬೆ ಹೈಕೋರ್ಟ್‌ನ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಎ.ಎಸ್‌. ಚಂದೂರ್ಕರ್‌ ಹಾಗೂ ರಾಜೇಶ್‌ ಪಾಟಿಲ್‌ ಈ ಸಂಬಂಧ ಆದೇಶ ನೀಡಿದ್ದಾರೆ. ‘ನಾನು 11ನೇ ತರಗತಿವರೆಗೂ ಶೇ 85ರಿಂದ ಶೇ93ರಷ್ಟು ಅಂಕ ಗಳಿಸುತ್ತಿದೆ. 2023ರ ಮಾರ್ಚ್‌ನಲ್ಲಿ 12ನೇ ತರಗತಿ ಪರೀಕ್ಷೆ ನಡೆದ ಹೊತ್ತಿನಲ್ಲಿ, ನಾನು ಖಿನ್ನತೆಗೆ ಒಳಗಾಗಿದ್ದೆ. ಆದ್ದರಿಂದ 600ಕ್ಕೆ 316 ಅಂಕಗಳನ್ನಷ್ಟೇ ಗಳಿಸಿದೆ’ ಎಂದು ವಿದ್ಯಾರ್ಥಿಯು ತನ್ನ ಅರ್ಜಿಯಲ್ಲಿ ವಿವರಿಸಿದ್ದಾರೆ.

‘2023ರ ಜುಲೈನಿಂದ 2023ರ ಡಿಸೆಂಬರ್‌ವರೆಗೆ ನಾನು ಖಿನ್ನತೆಗೆ ಚಿಕಿತ್ಸೆ ಪಡೆದುಕೊಂಡೆ. ಬಾಬಾ ಅಟಾಮಿಕ್‌ ರಿಸರ್ಚ್‌ ಸೆಂಟರ್‌ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಪಡೆದೆ. ಇಲ್ಲಿ ನನಗೆ ಅಂತರ್ಜಾಲ ಗೇಮಿಂಗ್‌ ಗೀಳಿನ ಮನೋರೋಗ ಇರುವುದನ್ನು ಖಾತರಿಪಡಿಸಿದರು. ಈ ಕಾರಣಕ್ಕಾಗಿ 2023ರ ಜುಲೈನಲ್ಲಿ ನಡೆದ ಮರು ಪರೀಕ್ಷೆಯನ್ನು ಬರೆಯಲು ಸಾಧ್ಯವಾಗಲಿಲ್ಲ’ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.

ADVERTISEMENT

‘2024ರ ಮಾರ್ಚ್‌ನಲ್ಲಿ ನಾನು ಓದಿದ ಕಾಲೇಜಿನಲ್ಲಿ ಮತ್ತೊಮ್ಮೆ ಪರೀಕ್ಷೆ ನಡೆಸಲಾಗಿತ್ತು. ಆಗ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಕೋರಿದ್ದೆ. ಆದರೆ, ಕಾಲೇಜಿನವರು ಅವಕಾಶ ನೀಡಲಿಲ್ಲ. ಅಂಕಗಳನ್ನು ಉತ್ತಮಪಡಿಸಿಕೊಳ್ಳಲು ಅವಕಾಶ ನೀಡುವ ಸಂಬಂಧ ಜುಲೈ 16ರಿಂದ ಮತ್ತೊಮ್ಮೆ ಪರೀಕ್ಷೆಯನ್ನು ಕಾಲೇಜು ನಡೆಸಲಿದೆ. ಈ ಬಾರಿಯಾದರೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ’ ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

ವಿದ್ಯಾರ್ಥಿಗೆ ನೀಡಿರುವ ಚಿಕಿತ್ಸೆಗೆ ಸಂಬಂಧಿಸಿದ ಪ್ರಮಾಣಪತ್ರಗಳು ಸರಿಯಾಗಿವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗೆ ಇನ್ನೊಂದು ಅವಕಾಶ ನೀಡುವುದು ನ್ಯಾಯಸಮ್ಮತವಾಗಿದೆ. ತಡವಾಗಿ ಪರೀಕ್ಷೆಗೆ ನೋಂದಾಯಿಸಿಕೊಂಡಿರುವುದರಿಂದ ಅಗತ್ಯ ಶುಲ್ಕಗಳನ್ನು ಪಾವತಿಸಬೇಕು. ಅಂಕಗಳನ್ನು ಉತ್ತಮಪಡಿಸಿಕೊಳ್ಳಲು ಅವಕಾಶ ನೀಡುವ ಸಂಬಂಧ ಜುಲೈ 16ರಿಂದ ನಡೆಯುವ ಪರೀಕ್ಷೆ ಬರೆಯಲು ವಿದ್ಯಾರ್ಥಿಗೆ ಅವಕಾಶ ನೀಡಬೇಕು

-ಬಾಂಬೆ ಹೈಕೋರ್ಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.