ADVERTISEMENT

ದೇವರ, ಟ್ರಾನ್ಸ್‌ಫಾರ್ಮರ್ ಒನ್ ಚಿತ್ರಕ್ಕೆ ನೀಡಿದ್ದ ಪ್ರಮಾಣಪತ್ರ ವಾಪಸ್‌ಗೆ ಆಗ್ರಹ

ಪಿಟಿಐ
Published 4 ಅಕ್ಟೋಬರ್ 2024, 13:07 IST
Last Updated 4 ಅಕ್ಟೋಬರ್ 2024, 13:07 IST
<div class="paragraphs"><p>ದೇವರ, ಟ್ರಾನ್ಸ್‌ಫಾರ್ಮರ್‌</p></div>

ದೇವರ, ಟ್ರಾನ್ಸ್‌ಫಾರ್ಮರ್‌

   

ನವದೆಹಲಿ: ಇತ್ತೀಚೆಗೆ ಬಿಡುಗಡೆಗೊಂಡ ಜೂನಿಯರ್ ಎನ್‌ಟಿಆರ್ ಅಭಿನಯದ ‘ದೇವರ’ ಹಾಗೂ ಹಾಲಿವುಡ್‌ನ ‘ಟ್ರಾನ್ಸ್‌ಫಾರ್ಮರ್ ಒನ್‌’ ಚಿತ್ರ ಸೇರಿದಂತೆ ಹಲವು ಚಿತ್ರಗಳಲ್ಲಿ ದೃಷ್ಟಿಹೀನರನ್ನು ಕಡೆಗಣಿಸಲಾಗಿದ್ದು, ಇವುಗಳಿಗೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ನೀಡಿರುವ ಪ್ರಮಾಣ ಪತ್ರ ಹಿಂಪಡೆಯಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದೆ. 

ಈ ಚಿತ್ರಗಳಲ್ಲಿ ದೃಷ್ಟಿಹೀನರಿಗೆ ಕ್ಲೋಸ್ಡ್‌ ಕ್ಯಾಪ್ಶನ್‌, ಓಪನ್‌ ಕ್ಯಾಪ್ಶನಿಂಗ್ ಹಾಗೂ ಆಡಿಯೊ ಡಿಸ್ಕ್ರಿಪ್ಶನ್‌ ಸೌಕರ್ಯವನ್ನು ನೀಡಿಲ್ಲ. ಕೇಂದ್ರ ಮಾಹಿತಿ ಹಾಗೂ ಪ್ರಸಾರ ಮಂತ್ರಾಲಯದ ಮರ್ಗಸೂಚಿಗೆ ಇವು ವಿರುದ್ಧವಾದದ್ದು. ಹೀಗಾಗಿ ಇವುಗಳಿಗೆ ನೀಡಿದ ಪ್ರಮಾಣಪತ್ರ ಹಿಂಪಡೆಯಬೇಕು ಎಂದು ಮಿಥಿಲೇಶ್ ಕುಮಾರ್ ಯಾದವ್ ಹಾಗೂ ಸುಮನ್ ಭೊಕ್ರಾಯ್‌ ಅವರು ಅರ್ಜಿ ಸಲ್ಲಿಸಿದ್ದರು.

ADVERTISEMENT

ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸಂಜೀವ್ ನರುಲಾ, ಅಂಗವಿಕಲರ ಸಬಲೀಕರಣ ಇಲಾಖೆ, ವಯಾಕಾಂ 18 ಸ್ಟುಡಿಯೊ, ಯುವಸುಧಾ ಆರ್ಟ್ಸ್‌ ಎಲ್‌ಎಲ್‌ಪಿ ಹಾಗೂ ಎನ್‌ಟಿಆರ್‌ ಆರ್ಟ್ಸ್‌ ಎಲ್‌ಎಲ್‌ಪಿಗೆ ನೋಟಿಸ್ ಜಾರಿ ಮಾಡಿದರು. ಜತೆಗೆ ಮುಂದಿನ ವಿಚಾರಣೆಯನ್ನು ಡಿ. 5ಕ್ಕೆ ಮುಂದೂಡಲಾಯಿತು.

ಚಿತ್ರಮಂದಿರಗಳಲ್ಲಿ ಒಂದಕ್ಕಿಂತ ಹೆಚ್ಚು ಭಾಷೆಗಳಲ್ಲಿ ಪ್ರದರ್ಶನ ಕಾಣುವ ಚಲನಚಿತ್ರಗಳನ್ನು ದೃಷ್ಟಿಹೀನರು ಹಾಗೂ ಶ್ರವಣ ದೋಷ ಉಳ್ಳವರ ವೀಕ್ಷಣೆಗೆ ಅನುಕೂಲವಾಗುವಂತೆ ಯಾವುದಾದರೂ ಒಂದು ಸೌಕರ್ಯವನ್ನು ಒದಗಿಸಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಈ ಮಾರ್ಗಸೂಚಿಯು 2024ರ ಮಾರ್ಚ್ 15ರಿಂದ ಜಾರಿಗೆ ಬಂದಿದೆ. ಈ ಮಾರ್ಗಸೂಚಿ ಅಳವಡಿಸಲು ಆರು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಅದು ಸೆ. 14ಕ್ಕೆ ಕೊನೆಗೊಂಡಿದೆ.

ಈ ನಿಟ್ಟಿನಲ್ಲಿ ಇವುಗಳಿಗೆ ನೀಡಿದ್ದ ಪ್ರಮಾಣಪತ್ರವನ್ನು ಹಿಂಪಡೆಯಬೇಕು ಎಂದು ಕೋರಿ ಅರ್ಜಿ ಸಲ್ಲಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.