ADVERTISEMENT

ಅನೈಸರ್ಗಿಕ ಲೈಂಗಿಕ ಕ್ರಿಯೆಗೆ BNSನಲ್ಲಿ ಇಲ್ಲ ಶಿಕ್ಷೆ: ಕೇಂದ್ರಕ್ಕೆ HC ಸೂಚನೆ

ವಕೀಲ ಗಂತವ್ಯ ಗುಲಾಟಿ ಸಲ್ಲಿಸಿದ ಪಿಐಎಲ್‌ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್

ಪಿಟಿಐ
Published 28 ಆಗಸ್ಟ್ 2024, 14:02 IST
Last Updated 28 ಆಗಸ್ಟ್ 2024, 14:02 IST
<div class="paragraphs"><p>ಅನೈಸರ್ಗಿಕ ಲೈಂಗಿಕ ಕ್ರಿಯೆಗೆ BNSನಲ್ಲಿ ಇಲ್ಲ ಶಿಕ್ಷೆ: ಕೇಂದ್ರಕ್ಕೆ HC ಸೂಚನೆ</p></div>

ಅನೈಸರ್ಗಿಕ ಲೈಂಗಿಕ ಕ್ರಿಯೆಗೆ BNSನಲ್ಲಿ ಇಲ್ಲ ಶಿಕ್ಷೆ: ಕೇಂದ್ರಕ್ಕೆ HC ಸೂಚನೆ

   

ನವದೆಹಲಿ: ನಿಸರ್ಗದ ನಿಯಮಕ್ಕೆ ವಿರುದ್ಧವಾದ ಲೈಂಗಿಕ ಕ್ರಿಯೆಗೆ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಅಡಿಯಲ್ಲಿ ಶಿಕ್ಷೆ ನಿಗದಿ ಮಾಡದೆ ಇರುವುದು ಸರಿಯಲ್ಲ ಎಂದು ಹೇಳುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು (ಪಿಐಎಲ್), ಮನವಿ ಎಂಬಂತೆ ಪರಿಗಣಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಬುಧವಾರ ಸೂಚನೆ ನೀಡಿದೆ.

ಭಾರತೀಯ ದಂಡ ಸಂಹಿತೆಯ (ಐಪಿಸಿ) ಬದಲಿಗೆ ಬಿಎನ್‌ಎಸ್‌ ಜಾರಿಗೆ ಬಂದಿದೆ. ಪಿಐಎಲ್ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಲೆಲಾ ಅವರು ಇದ್ದ ವಿಭಾಗೀಯ ಪೀಠವು, ‘ಮನವಿಯ ಕುರಿತಾಗಿ ತ್ವರಿತವಾಗಿ, ಸಾಧ್ಯವಾದರೆ ಆರು ತಿಂಗಳಲ್ಲಿ, ತೀರ್ಮಾನ ತೆಗದುಕೊಳ್ಳಬೇಕು’ ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ADVERTISEMENT

ವಕೀಲ ಗಂತವ್ಯ ಗುಲಾಟಿ ಎನ್ನುವವರು ಈ ಪಿಐಎಲ್ ಸಲ್ಲಿಸಿದ್ದರು. ಬಿಎನ್‌ಎಸ್‌ ಜಾರಿಯ ಪರಿಣಾಮವಾಗಿ ಐಪಿಸಿಯ ಸೆಕ್ಷನ್ 377 ಇಲ್ಲವಾಗಿದೆ. ಇದರಿಂದಾಗಿ ಕಾನೂನಿನ ನಿರ್ವಾತವೊಂದು ಸೃಷ್ಟಿಯಾಗಿದೆ ಎಂದು ಅವರು ಪಿಐಎಲ್‌ನಲ್ಲಿ ವಾದಿಸಿದ್ದರು.

ಈ ವಿಚಾರವಾಗಿ ಪರಿಶೀಲನೆ ನಡೆಸಲಾಗುತ್ತಿದೆ, ಸಮಗ್ರವಾದ ನಿಲುವೊಂದನ್ನು ತೆಗೆದುಕೊಳ್ಳಲಾಗುತ್ತದೆ. ಆದರೆ ಇದಕ್ಕೆ ತುಸು ಸಮಯ ಬೇಕು ಎಂದು ಕೇಂದ್ರ ಸರ್ಕಾರದ ಪರ ವಕೀಲರು ಪೀಠಕ್ಕೆ ವಿವರಣೆ ನೀಡಿದರು.

ಅಪರಾಧವೊಂದು ನಡೆದರೆ, ಅದರ ವಿಚಾರವಾಗಿ ಕಾನೂನು ನಿರ್ವಾತ ಇರಬಾರದು ಎಂದು ಪೀಠವು ಹೇಳಿತು. ‘ಸಮ್ಮತಿಯ (ಅನೈಸರ್ಗಿಕ) ಲೈಂಗಿಕ ಕ್ರಿಯೆ ಶಿಕ್ಷಾರ್ಹ ಎಂದು ಪರಿಗಣಿಸಲು ಜನ ಮನವಿ ಮಾಡುತ್ತಿಲ್ಲ. ಆದರೆ ನೀವು ಸಮ್ಮತಿ ಇಲ್ಲದ (ಅನೈಸರ್ಗಿಕ) ಲೈಂಗಿಕ ಕ್ರಿಯೆಯನ್ನೂ ಶಿಕ್ಷಾರ್ಹವೆಂದು ಪರಿಗಣಿಸುತ್ತಿಲ್ಲ. ಇಂದು ನ್ಯಾಯಾಲಯದ ಹೊರಗಡೆ ಏನಾದರೂ ಸಂಭವಿಸಿದರೆ, ಕಾನೂನಿನ ಅಡಿ ಅದು ಶಿಕ್ಷಾರ್ಹ ಅಲ್ಲ ಎಂದು ನಾವು ಕಣ್ಣುಮುಚ್ಚಿ ಕುಳಿತುಕೊಳ್ಳಬೇಕೇ’ ಎಂದು ಪೀಠವು ಪ್ರಶ್ನಿಸಿತು.

ಈ ವಿಚಾರದಲ್ಲಿ ತುರ್ತಾಗಿ ತೀರ್ಮಾನ ಆಗಬೇಕಿದೆ, ಇದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದು ಪೀಠವು ಹೇಳಿತು. ‘ಈ ವಿಚಾರವಾಗಿ ಸುಗ್ರೀವಾಜ್ಞೆಯ ಅಗತ್ಯ ಇದೆ ಎಂದಾದರೆ ಅದನ್ನೂ ಹೊರಡಿಸಬಹುದು’ ಎಂದು ಅದು ಹೇಳಿತು.

ಇಬ್ಬರು ವಯಸ್ಕರ ನಡುವಿನ ಅನೈಸರ್ಗಿಕ ಲೈಂಗಿಕ ಕ್ರಿಯೆ, ಅಪ್ರಾಪ್ತ ವಯಸ್ಸಿನವರ ಜೊತೆಗಿನ ಲೈಂಗಿಕ ಕ್ರಿಯೆ ಹಾಗೂ ಪ್ರಾಣಿಗಳೊಂದಿಗಿನ ಲೈಂಗಿಕ ಕ್ರಿಯೆಯನ್ನು ಐಪಿಸಿಯ ಸೆಕ್ಷನ್ 377 ಶಿಕ್ಷಾರ್ಹ ಎಂದು ಹೇಳಿತ್ತು. ಆದರೆ ಇದಕ್ಕೆ ಸರಿಸಮನಾದ ಸೆಕ್ಷನ್ ಈ ವರ್ಷದ ಜುಲೈ 1ರಿಂದ ಜಾರಿಗೆ ಬಂದಿರುವ ಬಿಎನ್‌ಎಸ್‌ನಲ್ಲಿ ಇಲ್ಲ ಎಂದು ಅರ್ಜಿದಾರರು ಹೇಳಿದ್ದರು.

ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರ, ಸಮ್ಮತಿಯ ಸಲಿಂಗಕಾಮ ಸೆಕ್ಷನ್ 377ರ ಅಡಿಯಲ್ಲಿ ಅಪರಾಧ ಅಲ್ಲ ಎಂದು ಪರಿಗಣಿತವಾಯಿತು. ಆದರೆ ಸಮ್ಮತಿ ಇಲ್ಲದೆ ನಡೆಯುವ ಇಂತಹ ಕೃತ್ಯಗಳು ಮಾತ್ರ ಅಪರಾಧ ಎಂದು ಪರಿಗಣಿತವಾಗಿತ್ತು. ಈಗ ಬಿಎನ್‌ಎಸ್‌ನಲ್ಲಿ ಈ ಬಗೆಯ ಸೆಕ್ಷನ್‌ ಇಲ್ಲದಿರುವ ಪರಿಣಾಮವಾಗಿ, ಕಾನೂನಿನ ಅಡಿ ಕೆಲವು ರಕ್ಷಣೆಗಳು ಸಿಗದಂತೆ ಆಗಿದೆ. ಇದರಿಂದಾಗಿ ಕೆಲವು ದುರ್ಬಲ ವರ್ಗಗಳ ಮೇಲೆ ತೀವ್ರ ಪರಿಣಾಮ ಉಂಟಾಗುತ್ತಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.

ಪುರುಷನೊಬ್ಬನ ಮೇಲೆ ಇನ್ನೊಬ್ಬ ಪುರುಷ ಲೈಂಗಿಕ ದೌರ್ಜನ್ಯ ಎಸಗಿದರೆ ಈಗಿರುವ ಕಾನೂನಿನ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲು ಅವಕಾಶವೇ ಇಲ್ಲ ಎಂದು ಅರ್ಜಿದಾರರು ದೂರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.