ನವದೆಹಲಿ:ಪಿಎಂ ಕೇರ್ಸ್ ಫಂಡ್ ‘ಸರ್ಕಾರಿ’ ನಿಧಿ ಎಂಬುದಾಗಿ ಘೋಷಿಸಲು ಕೋರಿರುವ ಅರ್ಜಿ ಸಂಬಂಧ ಕೇಂದ್ರ ಸರ್ಕಾರ ಸಲ್ಲಿಸಿರುವ ಒಂದು ಪುಟದ ಪ್ರತಿಕ್ರಿಯೆ ಒಪ್ಪದ ದೆಹಲಿ ಹೈಕೋರ್ಟ್,ಸಮಗ್ರ ಮತ್ತು ವಿಸ್ತೃತವಾದ ಉತ್ತರವನ್ನು ನಾಲ್ಕು ವಾರಗಳ ಒಳಗೆಸಲ್ಲಿಸಲು ಕೇಂದ್ರ ಸರ್ಕಾರಕ್ಕೆಮಂಗಳವಾರ ಸೂಚಿಸಿದೆ.
ಮುಖ್ಯನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮಣಿಯಂ ಪ್ರಸಾದ್ ಅವರಿದ್ದ ಪೀಠವು,ಪಿಎಂ ಕೇರ್ಸ್ ನಿಧಿಯು ಸರ್ಕಾರಿ ನಿಧಿ ಎಂದು ಪ್ರತಿಪಾದಿಸಿ ಸಮ್ಯಕ್ ಗಂಗ್ವಾಲ್ ಎಂಬುವವರು 2021ರಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿತು.
‘ತುರ್ತು ಪರಿಸ್ಥಿತಿಗಳಲ್ಲಿ ನಾಗರಿಕರಿಗೆ ನೆರವು ಮತ್ತು ಪರಿಹಾರ ಕಲ್ಪಿಸುವ ಪ್ರಧಾನಿಯವರ ನಿಧಿ(ಪಿಎಂ ಕೇರ್ಸ್ ಫಂಡ್) ಸಾಮಾನ್ಯ ವಿಷಯವಲ್ಲ. ಇಷ್ಟೊಂದು ಮಹತ್ವದ ವಿಷಯಕ್ಕೆ ಒಂದು ಪುಟದ ಪ್ರತಿಕ್ರಿಯೆ ಸಲ್ಲಿಸುವುದಾ?ಅದರಾಚೆಗೆ ಏನೂ ಇಲ್ಲವೇ? ಅರ್ಜಿದಾರರ ವಕೀಲರು ಎತ್ತಿರುವ ಒಂದು ವಿಷಯವೂ ಇದರಲ್ಲಿ ಇಲ್ಲ. ನಮಗೆ ವಿಸ್ತೃತ ಪ್ರತಿಕ್ರಿಯೆ ಬೇಕು’ ಎಂದು ಪೀಠವು, ಕೇಂದ್ರ ಸರ್ಕಾರಕ್ಕೆ ಖಡಕ್ ಸೂಚನೆ ನೀಡಿತು.
ಇದೇ ಅರ್ಜಿದಾರರ ಇಂತಹದೇ ಮತ್ತೊಂದು ಅರ್ಜಿಗೆ ಈಗಾಗಲೇ ವಿವರ ಉತ್ತರ ಸಲ್ಲಿಸಲಾಗಿದೆ ಎಂದು ಕೇಂದ್ರದ ಪರ ಹಾಜರಿದ್ದ ವಕೀಲರು ಪೀಠಕ್ಕೆ ಮಾಹಿತಿ ನೀಡಿದರು.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅರ್ಜಿದಾರರ ಎಲ್ಲ ವಾದಗಳ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯನ್ಯಾಯಮೂರ್ತಿಗಳು ‘ಮೊದಲು ನಾಲ್ಕು ವಾರಗಳಲ್ಲಿ ಸಮಗ್ರ ಉತ್ತರ ಸಲ್ಲಿಸಿ. ಮುಂದಿನ ಎರಡು ವಾರಗಳಲ್ಲಿ ಪುನಃ ಇನ್ಯಾರಾದರೂ ಅರ್ಜಿ ಸಲ್ಲಿಸಿದರೆ ಅವುಗಳನ್ನೂ ಇದರಲ್ಲಿ ಸೇರಿಸುತ್ತೇವೆ’ ಎಂದು ಹೇಳಿ, ಮುಂದಿನ ವಿಚಾರಣೆಯನ್ನು ಸೆ.16ಕ್ಕೆ ಪಟ್ಟಿ ಮಾಡಲು ಸೂಚಿಸಿದರು.
ಅರ್ಜಿದಾರಸಮ್ಯಕ್ ಗಂಗ್ವಾಲ್ ಅವರು ಪಿಎಂ ಕೇರ್ಸ್ ಅನ್ನುಆರ್‌ಟಿಐ ಕಾಯ್ದೆಯಡಿ ‘ಸಾರ್ವಜನಿಕ ಪ್ರಾಧಿಕಾರ’ವೆಂದು ಘೋಷಿಸುವಂತೆ ನಿರ್ದೇಶಿಸಲು ಕೋರಿ 2020ರಲ್ಲಿ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.