ADVERTISEMENT

ವರವರ ರಾವ್‌ಗೆ ಅನಾರೋಗ್ಯ: ಕುಟುಂಬದವರ ಭೇಟಿಗೆ ಅನುಮತಿ ನೀಡಲು ಮನವಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 15:15 IST
Last Updated 20 ಜುಲೈ 2020, 15:15 IST
ವರವರ ರಾವ್
ವರವರ ರಾವ್   

ಮುಂಬೈ: ಎಲ್ಗಾರ್‌ ಪರಿಷತ್‌‌ ಮತ್ತು ನಕ್ಸಲರ ಜತೆ ಸಂಪರ್ಕ ಹೊಂದಿದ ಆರೋಪದಲ್ಲಿ ಬಂಧಿತರಾಗಿರುವ ಕವಿ ವರವರ ರಾವ್ ಕೋವಿಡ್ ಪೀಡಿತರಾಗಿದ್ದು, ನಿರ್ದಿಷ್ಟ ದೂರದ ಅಂತರದಲ್ಲಿ ರಾವ್ ಅವರನ್ನು ನೋಡಲು ಅವರ ಕುಟುಂಬಕ್ಕೆ ಅವಕಾಶ ಕಲ್ಪಿಸಲು ಸಾಧ್ಯವೇ ಎಂದು ಸೋಮವಾರ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್ ಕೇಳಿದೆ.

ನ್ಯಾಯಮೂರ್ತಿಗಳಾದ ಎಸ್‌.ಎಸ್. ಶಿಂಧೆ ಮತ್ತು ಎಸ್‌.ಪಿ. ತಾವಡೆ ಅವರನ್ನೊಳಗೊಂಡ ವಿಭಾಗೀಯ ಪೀಠವು, ‘ರಾವ್ ಅವರ ಆರೋಗ್ಯ ಕುರಿತು ಎನ್‌ಐಎ ಮತ್ತು ಮಹಾರಾಷ್ಟ್ರ ಸರ್ಕಾರವು ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು ಹಾಗೂ ಜುಲೈ 22ರೊಳಗೆ ರಾವ್ ಅವರನ್ನು ಭೇಟಿಯಾಗಲು ಅವರ ಕುಟುಂಬಕ್ಕೆ ಅನುಮತಿ ನೀಡಲು ಸಾಧ್ಯವೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸೂಚನೆ ನೀಡಿತು.

‘ರಾವ್ ಅವರು ಮರಣಶಯ್ಯೆಯಲ್ಲಿದ್ದು, ತಮ್ಮ ಕೊನೆಯ ದಿನಗಳನ್ನು ಎಣಿಸುತ್ತಿದ್ದಾರೆ. ಕನಿಷ್ಠ ಅವರ ಕುಟುಂಬ ಸದಸ್ಯರ ಸಮ್ಮುಖದಲ್ಲಾದರೂ ಅವರಿಗೆ ಸಾಯಲು ಅವಕಾಶ ಕಲ್ಪಿಸಬೇಕು’ ಎಂದು ರಾವ್ ಅವರ ಪರ ಸುದೀಪ್ ಪಾಸ್‌ಬೋಲಾ ಮನವಿ ಮಾಡಿಕೊಂಡ ಬಳಿಕ ನ್ಯಾಯಾಲಯ ಈ ನಿರ್ದೇಶನ ನೀಡಿದೆ.

ADVERTISEMENT

‘ರಾವ್ ಅವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ. ಜೆ.ಜೆ. ಆಸ್ಪತ್ರೆಯಲ್ಲಿದ್ದಾಗ ರಾವ್ ತಮ್ಮ ತಲೆಯನ್ನು ಆಸ್ಪತ್ರೆಯ ಹಾಸಿಗೆಗೆ ಗುದ್ದಿಕೊಂಡಿದ್ದರಿಂದ ಅವರಿಗೆ ತೀವ್ರ ಗಾಯಗಳಾಗಿವೆ. ಕೋವಿಡ್–19 ಜತೆಗೆ ಹಲವು ಕಾಯಿಲೆಗಳಿಂದಲೂ ಬಳಲುತ್ತಿರುವ ರಾವ್, ಭ್ರಮನಿರಸನಗೊಂಡಿದ್ದಾರೆ’ ಎಂದು ವಕೀಲ ಸುದೀಪ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.