ಮದುರೈ: ಇಂಗ್ಲಿಷ್ ಭಾಷೆಯಲ್ಲಿ ಬರೆದ ಪತ್ರಕ್ಕೆ, ಅದೇ ಭಾಷೆಯಲ್ಲಿಯೇ ಪ್ರತ್ಯುತ್ತರ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿರುವ ಮದ್ರಾಸ್ ಹೈಕೋರ್ಟ್, ಆಯಾ ಭಾಷೆಯಲ್ಲೇ ಪ್ರತಿಕ್ರಿಯೆ ನೀಡುವುದು ಕೇಂದ್ರ ಸರ್ಕಾರದ ಕರ್ತವ್ಯ ಎಂದು ಅಭಿಪ್ರಾಯಪಟ್ಟಿದೆ.
ಮದುರೈನ ಸಿಪಿಎಂ ಪಕ್ಷದ ಸಂಸದ ಸು. ವೆಂಕಟೇಶನ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್. ಕಿರುಬಕಾರನ್ ಮತ್ತು ಎಂ. ದುರೈಸ್ವಾಮಿ ಅವರನ್ನೊಳಗೊಂಡ ಪೀಠವು, ‘ಸಂವಿಧಾನದ ಅನ್ವಯ, ದೇಶದ ಪ್ರತಿಯೊಬ್ಬ ವ್ಯಕ್ತಿಯೂ ದೇಶ ಅಥವಾ ರಾಜ್ಯದಲ್ಲಿ ಬಳಸುವ ಯಾವುದೇ ಭಾಷೆಯಲ್ಲಿ ಸರ್ಕಾರಕ್ಕೆ ಪತ್ರ ಬರೆಯುವ ಹಕ್ಕು ಹೊಂದಿರುತ್ತಾರೆ‘ ಎಂದು ಹೇಳಿದೆ. ಇದೇ ವೇಳೆ ಅಧಿಕೃತ ಭಾಷಾ ಕಾಯ್ದೆಯನ್ನು ಉಲ್ಲೇಖಿಸಿದ ನ್ಯಾಯಪೀಠ, ‘ಈ ಕಾಯ್ದೆ ಕೂಡ ಇದನ್ನೇ ಹೇಳುತ್ತದೆ‘ ಎಂದು ತಿಳಿಸಿದೆ.
ಈ ಹಿಂದೆ, ಸಂಸದ ವೆಂಕಟೇಶನ್ ಅವರು , ತಮಿಳುನಾಡಿನಲ್ಲಿ ಸಿಆರ್‌ಪಿಎಫ್‌ಗಾಗಿ ನಡೆಯುವ ನೇಮಕಾತಿ ಪರೀಕ್ಷಾ ಕೇಂದ್ರಗಳನ್ನು ತೆರೆಯುವಂತೆ ಕೋರಿ ಕೇಂದ್ರಕ್ಕೆ ಪತ್ರ ಬರೆದಿದ್ದರು. ಇದಕ್ಕೆ ಕೇಂದ್ರದ ಗೃಹ ಸಚಿವಾಲಯ ಹಿಂದಿಯಲ್ಲಿ ಪ್ರತಿಕ್ರಿಯೆ ನೀಡಿತ್ತು.
ಇದನ್ನು ಆಧಾರವಾಗಿಟ್ಟುಕೊಂಡು, ವೆಂಕಟೇಶನ್ ಅವರು ಮದ್ರಾಸ್ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ನಡೆಯುವ ಎಲ್ಲ ಸಂವಹನದಲ್ಲಿ ಇಂಗ್ಲಿಷ್ ಭಾಷೆಯನ್ನು ಮಾತ್ರ ಬಳಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.