ADVERTISEMENT

ತಾಯಿಯನ್ನು ಕೊಂದು, ದೇಹದ ಭಾಗಗಳನ್ನು ತಿಂದ ಮಗನಿಗೆ ಮರಣದಂಡನೆ ಕಾಯಂ: ಬಾಂಬೆ HC

ಪಿಟಿಐ
Published 1 ಅಕ್ಟೋಬರ್ 2024, 12:46 IST
Last Updated 1 ಅಕ್ಟೋಬರ್ 2024, 12:46 IST
<div class="paragraphs"><p> ಮರಣದಂಡನೆ (ಪ್ರಾತಿನಿಧಿಕ ಚಿತ್ರ)</p></div>

ಮರಣದಂಡನೆ (ಪ್ರಾತಿನಿಧಿಕ ಚಿತ್ರ)

   

ಮುಂಬೈ: ತನ್ನ ತಾಯಿಯನ್ನೇ ಕೊಂದು, ದೇಹದ ಭಾಗಗಳನ್ನು ತಿಂದ ಕೊಲ್ಹಾಪುರದ ವ್ಯಕ್ತಿಗೆ ಮರಣದಂಡನೆ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್‌ ಮಂಗಳವಾರ ಕಾಯಂಗೊಳಿಸಿದೆ.

ಸುನಿಲ್ ಕುಚಕೊರವಿ ಎಂಬಾತನೆ ಮರಣದಂಡನೆ ಗುರಿಯಾದ ಅಪರಾಧಿ. ನ್ಯಾ. ರೇವತಿ ಮೋಹಿತೆ ಡೇರೆ ಹಾಗೂ ನ್ಯಾ. ಪೃಥ್ವಿರಾಜ್ ಚವಾಣ್‌ ಅವರಿದ್ದ ವಿಭಾಗೀಯ ಪೀಠವು ಈ ಮಹತ್ವದ ತೀರ್ಪನ್ನು ನೀಡಿದೆ.

ADVERTISEMENT

‘2017ರಲ್ಲಿ ನಡೆದ ಈ ನರಭಕ್ಷಣೆಯ ಪ್ರಕರಣವು ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿದೆ. ಇದು ಕೇವಲ ಕೊಲೆ ಪ್ರಕರಣವಲ್ಲ. ಬದಲಿಗೆ ದೇಹವನ್ನು ತುಂಡುಗಳನ್ನಾಗಿ ಕತ್ತರಿಸಿ ಮಿದುಳು, ಹೃದಯ, ಯಕೃತ್, ಮೂತ್ರಪಿಂಡ, ಕರುಳನ್ನು ಅಪರಾಧಿ ಹೊರಕ್ಕೆ ತೆಗೆದಿದ್ದಾನೆ. ಎದೆಯ ಮೂಳೆ ಹಾಗೂ ಹೃದಯವನ್ನು ಬೇಯಿಸಿ ತಿಂದ ಕ್ರೂರ ಅಪರಾಧ ಇದಾಗಿದೆ’ ಎಂದು ಹೈಕೋರ್ಟ್‌ ಆಘಾತ ವ್ಯಕ್ತಪಡಿಸಿದೆ.

‘ಇಲ್ಲಿ ಅಪರಾಧಿಗೆ ಸುಧಾರಣೆಗೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ. ಒಂದೊಮ್ಮೆ ಜೀವಾವಧಿ ಶಿಕ್ಷೆ ವಿಧಿಸಿದರೂ, ಜೈಲಿನಲ್ಲೂ ಇಂಥದ್ದೇ ಅಪರಾಧ ನಡೆಸುವ ಅಪಾಯವಿದೆ’ ಎಂದು ಪೀಠ ಅಭಿಪ್ರಾಯಪಟ್ಟಿತು.

ಮರಣದಂಡನೆಗೆ ಗುರಿಯಾದ ಕುಚಕೊರವಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ತೀರ್ಪನ್ನು ತಿಳಿಸಲಾಯಿತು.

ಪ್ರಕರಣ ಏನು...?

ಮದ್ಯ ಸೇವನೆಗೆ ಹಣ ನೀಡಲಿಲ್ಲ ಎಂಬ ನೆಪವೊಡ್ಡಿ ಕೊಲ್ಹಾಪುರ ನಗರದ ನಿವಾಸಿಯಾದ ಯಲ್ಲಮ್ಮ ರಾಮ ಕುಚಕೊರವಿ (63) ಅವರನ್ನು 2017ರ ಆ. 28ರಂದು ಅವರ ಮಗ ಸುನಿಲ್ ಕುಚಕೊರವಿ ಭೀಕರವಾಗಿ ಹತ್ಯೆ ಮಾಡಿದ್ದ. ನಂತರ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಕೆಲ ಭಾಗಗಳನ್ನು ತಿಂದಿದ್ದ.

ವಿಚಾರಣೆ ನಡೆಸಿದ ಕೆಳ ಹಂತದ ನ್ಯಾಯಾಲಯವು 2021ರಲ್ಲಿ ಸುನಿಲ್‌ಗೆ ಮರಣ ದಂಡನೆ ವಿಧಿಸಿತ್ತು. ಪುಣೆಯ ಯರವಾಡ ಜೈಲಿಗೆ ಈತನನ್ನು ಸ್ಥಳಾಂತರಿಸಲಾಗಿತ್ತು. 

ಸಮಾಜದ ಆತ್ಮಸಾಕ್ಷಿಯನ್ನೇ ಬೆಚ್ಚಿ ಬೀಳಿಸಿರುವ ಈ ಪ್ರಕರಣವು ಅತ್ಯಂತ ಅಪರೂಪದಲ್ಲಿ ಅಪರೂಪವಾದ ಪ್ರಕರಣವಾಗಿದೆ ಎಂದು ಕೆಳ ಹಂತದ ನ್ಯಾಯಾಲಯವೂ ಅಭಿಪ್ರಾಯಪಟ್ಟಿತ್ತು. ಅಲ್ಲಿನ ಆದೇಶ ಪ್ರಶ್ನಿಸಿ ಸುನಿಲ್‌ ಹೈಕೋರ್ಟ್ ಮೆಟ್ಟಿಲೇರಿದ್ದ. ಹೈಕೋರ್ಟ್‌ನ ವಿಭಾಗೀಯ ಪೀಠವೂ ಕೆಳ ಹಂತದ ನ್ಯಾಯಾಲಯದ ಆದೇಶವನ್ನೇ ಎತ್ತಿ ಹಿಡಿದು, ಮರಣದಂಡನೆ ಕಾಯಂಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.