ADVERTISEMENT

ಗರ್ಭಪಾತಕ್ಕೆ ಅವಕಾಶ ನಿರಾಕರಿಸಿದ ದೆಹಲಿ ಹೈಕೋರ್ಟ್‌

ಪಿಟಿಐ
Published 1 ಫೆಬ್ರುವರಿ 2024, 14:47 IST
Last Updated 1 ಫೆಬ್ರುವರಿ 2024, 14:47 IST
ದೆಹಲಿ ಹೈಕೋರ್ಟ್‌ 
ದೆಹಲಿ ಹೈಕೋರ್ಟ್‌    

ನವದೆಹಲಿ: 20 ವರ್ಷ ವಯಸ್ಸಿನ ಅವಿವಾಹಿತೆಗೆ ಗರ್ಭಪಾತದ ಮೂಲಕ 28 ವಾರಗಳ ಭ್ರೂಣ ತೆಗೆಸಲು ದೆಹಲಿ ಹೈಕೋರ್ಟ್‌ ಗುರುವಾರ ಅವಕಾಶ ನಿರಾಕರಿಸಿದೆ. ವೈದ್ಯಕೀಯ ವರದಿ ಪ್ರಕಾರ ಭ್ರೂಣದ ಬೆಳವಣಿಗೆ ಸಹಜವಾಗಿದೆ. ಗರ್ಭಪಾತಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದಿದೆ.

ಗರ್ಭಪಾತಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿರುವ ಮಹಿಳೆಯು, ತಾನು ವ್ಯಕ್ತಿಯೊಬ್ಬರ ಜೊತೆ ಒಪ್ಪಿತ ಸಂಬಂಧದಲ್ಲಿ ಇದ್ದುದಾಗಿ ಮತ್ತು ಗರ್ಭಿಣಿ ಆಗಿರುವ ವಿಚಾರ ತೀರಾ ಈಚೆಗೆ ತಿಳಿದುಬಂದಿದ್ದಾಗಿ ಅರ್ಜಿಯಲ್ಲಿ ಹೇಳಿದ್ದಾರೆ.

‘ನನ್ನ ಕಕ್ಷೀದಾರ ಮಹಿಳೆಗೆ ತಾನು ಗರ್ಭಿಣಿ ಎಂಬ ವಿಚಾರ ತಿಳಿದಿದ್ದೇ ಜನವರಿ 25ರಂದು. ತಾನು ಮಗು ಪಡೆಯುವ ಪರಿಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಗರ್ಭಪಾತ ಮಾಡಿ ಎಂದು ವೈದ್ಯರಿಗೆ ಮನವಿ ಮಾಡಿದ್ದರು. ಆದರೆ ಈಗಾಗಲೇ 24 ವಾರಗಳು ಕಳೆದಿರುವುದಿಂದ ಗರ್ಭಪಾತ ಮಾಡಲು ಸಾಧ್ಯವಿಲ್ಲ ವೈದ್ಯರು ಎಂದು ಹೇಳಿದರು’ ಎಂದು ಮಹಿಳೆ ಪರ ವಕೀಲರು ಕೋರ್ಟ್‌ಗೆ ಹೇಳಿದರು.

ADVERTISEMENT

ಮಹಿಳೆಯ ಕುಟುಂಬ ಸದಸ್ಯರಿಗೆ ಆಕೆಯು ಗರ್ಭಿಣಿ ಆಗಿರುವ ವಿಚಾರ ತಿಳಿದಿಲ್ಲ. ಆಕೆ ಅವಿವಾಹಿತೆ ಆಗಿರುವ ಕಾರಣ ಈ ಮನವಿಯನ್ನು ಪರಿಗಣಿಸಬೇಕು ಎಂದು ಅವರು ಕೋರ್ಟ್‌ಗೆ ಮನವಿ ಮಾಡಿದರು.

ಅಲ್ಲದೇ, ಆಕೆಯ ಮಾನಸಿಕ ಮತ್ತು ದೈಹಿಕ ಆರೋಗ್ಯದ ಬಗ್ಗೆ ತಿಳಿಯಲು ಆಕೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸುವಂತೆ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಏಮ್ಸ್‌) ನಿರ್ದೇಶನ ನೀಡಬೇಕು ಎಂದು ಕೂಡಾ ವಕೀಲರು ಕೋರ್ಟ್‌ಗೆ ಮನವಿ ಮಾಡಿದರು.

ಆದರೆ ಮನವಿಯನ್ನು ಕೋರ್ಟ್‌ ತಿರಸ್ಕರಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.