ADVERTISEMENT

ಕೇರಳ: ಹಾಲಿ ವಿಧಾನಸಭೆಯ ಅವಧಿಯಲ್ಲೇ ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆಗೆ ಆದೇಶ

ಪಿಟಿಐ
Published 12 ಏಪ್ರಿಲ್ 2021, 12:05 IST
Last Updated 12 ಏಪ್ರಿಲ್ 2021, 12:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೊಚ್ಚಿ: ರಾಜ್ಯಸಭೆಯ ಮೂರು ಸ್ಥಾನಗಳಿಗೆಕೇರಳ ವಿಧಾನಸಭೆಯಿಂದ ನಡೆಯಬೇಕಿರುವ ದ್ವೈವಾರ್ಷಿಕ ಚುನಾವಣೆಯನ್ನು ಪ್ರಸಕ್ತ ವಿಧಾನಸಭೆಯ ಅವಧಿ ಮುಗಿಯುವ ಮುನ್ನವೇ ನಡೆಸಬೇಕು ಎಂದು ಕೇರಳ ಹೈಕೋರ್ಟ್‌ ಸೋಮವಾರ ಚುನಾವಣಾ ಆಯೋಗಕ್ಕೆ ಆದೇಶ ನೀಡಿದೆ.

ತೆರವಾಗುವ ಸ್ಥಾನಗಳು ಆದಷ್ಟು ಶೀಘ್ರ ಭರ್ತಿ ಆಗಬೇಕು. ಆಯೋಗವು ಈ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್ ಹೇಳಿದರು.

ಶೀಘ್ರ ಈ ಸ್ಥಾನಗಳನ್ನು ಭರ್ತಿ ಮಾಡುವುದು ನಮ್ಮ ಹೊಣೆ ಎಂದು ಆಯೋಗವೇ ಒಪ್ಪಿಕೊಂಡಿದೆ. ಹೀಗಾಗಿ, ಇನ್ನಷ್ಟು ವಿಳಂಬವಾಗದಂತೆ ಕ್ರಮವಹಿಸಬೇಕು. ಹೊಸ ಚುನಾಯಿತ ಪ್ರತಿನಿಧಿಗಳು ಬರುವ ಮೇ 2, 2021ರ ಒಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ನ್ಯಾಯಮೂರ್ತಿ ಪಿ.ವಿ.ಆಶಾ ಆದೇಶದಲ್ಲಿ ತಿಳಿಸಿದರು.

ADVERTISEMENT

ಉದ್ದೇಶಿತ ಚುನಾವಣೆ ಪ್ರಕ್ರಿಯೆಯನ್ನು ಯಥಾಸ್ಥಿತಿಯಲ್ಲಿಡುವ ಆಯೋಗದ ತೀರ್ಮಾನವನ್ನು ಪ್ರಶ್ನಿಸಿ ರಾಜ್ಯ ವಿಧಾನಸಭೆ ಮತ್ತು ಆಡಳಿತರೂಡ ಸಿಪಿಎಂ ಅರ್ಜಿ ಸಲ್ಲಿಸಿದ್ದವು.

ಹೈಕೋರ್ಟ್‌ಗೆ ಈ ಸಂಬಂಧ ಸಲ್ಲಿಸಿದ ಪ್ರತಿಕ್ರಿಯೆಯಲ್ಲಿ ಚುನಾವಣೆ ಕುರಿತಂತೆ ಯಾವುದೇ ದಿನಾಂಕವನ್ನು ಆಯೋಗ ನಮೂದಿಸಿಲ್ಲ. ಅಬ್ದುಲ್‌ ವಹಾಬ್‌ (ಐಯುಎಂಎಲ್‌), ಕೆ.ಕೆ.ರಾಗೇಶ್‌ (ಸಿಪಿಎಂ), ವಯಲಾರ್ ರವಿ (ಕಾಂಗ್ರೆಸ್‌) ಅವರು ಏಪ್ರಿಲ್‌ 21ರಂದು ನಿವೃತ್ತರಾಗುತ್ತಿದ್ದು, ತೆರವಾಗುವ ಸ್ಥಾನಗಳಿಗೆ ಚುನಾವಣೆ ಆಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.