ಚೆನ್ನೈ: ‘ಎರಡನೇ ವಿವಾಹದಲ್ಲಿ ಮೂರನೇ ಮಗು ಹೊಂದುವ ಸರ್ಕಾರಿ ಮಹಿಳಾ ಉದ್ಯೋಗಿಗೆ ಪೂರ್ಣವೇತನ ಸಹಿತ ಒಂದು ವರ್ಷ ಹೆರಿಗೆ ರಜೆ ನೀಡಬೇಕು’ ಎಂದು ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.
‘ಮೊದಲ ವಿವಾಹದಲ್ಲಿ ಜನಿಸಿದ ಇಬ್ಬರು ಮಕ್ಕಳು ಮೊದಲ ಪತಿಯೊಂದಿಗೇ ವಾಸಿಸುತ್ತಿರುವ ಕಾರಣ, ಇಂಥ ಪ್ರಕರಣದಲ್ಲಿ ಎರಡನೇ ವಿವಾಹವಾಗಿ ಮೂರನೇ ಮಗುವನ್ನು ಹೊಂದುವ ಉದ್ಯೋಗಿಗೆ ವೇತನ ಸಹಿತ ಒಂದು ವರ್ಷ ಹೆರಿಗೆ ರಜೆ ಮಂಜೂರು ನೀಡಬೇಕು’ ಎಂದು ನ್ಯಾಯಮೂರ್ತಿ ವಿ. ಪಾರ್ಥಿಬನ್ ಅವರು ತೀರ್ಪು ನೀಡಿದ್ದಾರೆ.
ಏನಿದು ಪ್ರಕರಣ?: ತಮಿಳುನಾಡಿನ ಸರ್ಕಾರಿ ಉದ್ಯೋಗಿ ಕೆ. ಉಮಾದೇವಿ ಅವರು 2006ರಲ್ಲಿ ಎ. ಸುರೇಶ್ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು ಜನಿಸಿದ್ದರು. 2017ರಲ್ಲಿ ಸುರೇಶ್ ಅವರಿಂದ ವಿಚ್ಛೇದನ ಪಡೆದಿದ್ದ ಉಮಾದೇವಿ ಅವರು 2018ರಲ್ಲಿ ಎಂ. ರಾಜ್‌ಕುಮಾರ್ ಅವರನ್ನು ವಿವಾಹವಾಗಿದ್ದರು. ಎರಡನೇ ವಿವಾಹದಲ್ಲಿ ಮೂರನೇ ಮಗುವಿಗೆ ತಾಯಿಯಾಗಿದ್ದ ಉಮಾದೇವಿ ಅವರು 2021ರ ಆಗಸ್ಟ್ 28ರಂದು ಹೆರಿಗೆ ರಜೆ ಕೋರಿ ಧರ್ಮಪುರಿಯ ಜಿಲ್ಲಾ ಮುಖ್ಯಶಿಕ್ಷಣಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು.
ಆದರೆ, ಸರ್ಕಾರಿ ಉದ್ಯೋಗಿಗೆ ಎರಡು ಮಕ್ಕಳಿಗೆ ಮಾತ್ರ ಹೆರಿಗೆ ರಜೆ ಇದೆ ಎಂದು ಕಾರಣ ನೀಡಿ ಶಿಕ್ಷಣಾಧಿಕಾರಿಯು ಅರ್ಜಿಯನ್ನು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಉಮಾದೇವಿ ಅವರು ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಪಾರ್ಥಿಬನ್ ಅವರು, 2018ರ ಜೂನ್ 20ರ ಸರ್ಕಾರಿ ಆದೇಶವನ್ನು ಉಲ್ಲೇಖಿಸಿ, ‘ಸರ್ಕಾರಿ ನೌಕರಿಯಲ್ಲಿರುವ ಮಹಿಳಾ ಉದ್ಯೋಗಿಗೆ ಮೊದಲ ಹೆರಿಗೆಯಲ್ಲಿ ಅವಳಿ– ಜವಳಿ ಮಕ್ಕಳು ಜನಿಸಿದರೆ, ಆ ಮಹಿಳೆಗೆ ಮೂರನೇ ಮಗು ಹೊಂದುವ ಸಮಯದಲ್ಲಿ ಅದನ್ನು ಎರಡನೇ ಹೆರಿಗೆ ಎಂದು ಪರಿಗಣಿಸಿ, ಹೆರಿಗೆ ರಜೆ ಮಂಜೂರು ಮಾಡಬೇಕು. ಇಂಥದ್ದೇ ವಿಶೇಷ ಪ್ರಕರಣ ಅಂದರೆ ಮೊದಲ ವಿವಾಹದಲ್ಲಿ ಇಬ್ಬರು ಮಕ್ಕಳಿದ್ದರೂ ಆ ಮಕ್ಕಳು ಮೊದಲ ಪತಿಯ ಜತೆಗೆ ಇರುವುದರಿಂದ ಎರಡನೇ ವಿವಾಹದ ಸರ್ಕಾರಿ ಉದ್ಯೋಗಿಗೆ ಮೂರನೇ ಮಗುವಿನ ಸಂದರ್ಭದಲ್ಲಿ ವೇತನ ಸಹಿತ ಒಂದು ವರ್ಷ ಹೆರಿಗೆ ರಜೆ ಮಂಜೂರು ಮಾಡಬೇಕು’ ಎಂದು ತೀರ್ಪು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.