ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಬಳಿ ಸ್ಫೋಟಕಗಳು ತುಂಬಿದ್ದ ವಾಹನ ನಿಲ್ಲಿಸಿದ ಪ್ರಕರಣ ಹಾಗೂ ಉದ್ಯಮಿ ಮನಸುಖ್ ಹಿರೇನ್ ಹತ್ಯೆ ಪ್ರಕರಣದಲ್ಲಿ ಬಂಧಿತವಾಗಿರುವ ಸಚಿನ್ ವಾಜೆ ಅವರ ಗೃಹಬಂಧನದ ಅರ್ಜಿಗೆ ಸಂಬಂಧಿಸಿದಂತೆ ಅಫಿಡವಿಟ್ ಸಲ್ಲಿಸುವಂತೆ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ಬಾಂಬೆ ಹೈಕೋರ್ಟ್ ಬುಧವಾರ ನಿರ್ದೇಶನ ನೀಡಿದೆ.
ಕಳೆದ ತಿಂಗಳು ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆಗೊಳಗಾಗಿದ್ದ ವಾಜೆಯನ್ನು ಖಾಸಗಿ ಆಸ್ಪತ್ರೆಯಲ್ಲಿರಿಸಲು ಕೋರಿ ಎನ್ಐಎ ಸಲ್ಲಿಸಿದ್ದ ಮನವಿಗೆ ನ್ಯಾಯಾಲಯ ಸ್ಪಂದಿಸಿತ್ತು. ನಂತರ ಜೈಲಿನಲ್ಲಿದ್ದರೆ ಸೋಂಕಿಗೀಡಾಗುವ ಸಾಧ್ಯತೆ ಇರುವುದರಿಂದ ತಮ್ಮನ್ನು ಗೃಹಬಂಧನದಲ್ಲಿರಿಸುವಂತೆ ಕೋರಿ ವಾಜೆ ಅವರು ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಆದರೆ, ಈ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಕಳೆದ ವಾರ ಈ ಸಂಬಂಧ ವಾಜೆ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ನ್ಯಾಯಮೂರ್ತಿಗಳಾದ ನಿತಿನ್ ಜಮ್ದಾರ್ ಮತ್ತು ಸಾರಂಗ್ ಕೊತ್ವಾಲ್ ನೇತೃತ್ವದ ವಿಭಾಗೀಯ ಪೀಠವು ಗೃಹಬಂಧನಕ್ಕೆ ಸಂಬಂಧಿಸಿದಂತೆ ಒಂದು ವಾರದೊಳಗೆ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸುವಂತೆ ಎನ್ಐಎಗೆ ನಿರ್ದೇಶನ ನೀಡಿದೆ.
ವಾಜೆ ಪರ ವಕೀಲರಾದ ಸುದೀಪ್ ಪಾಸ್ಬೋಲಾ ಮತ್ತು ರೌನಕ್ ನಾಯಕ್ ಅವರು, ವಾಜೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದು, ನವಿ ಮುಂಬೈನ ತಾಲೋಜಾ ಜೈಲಿನಲ್ಲಿರಿಸಲಾಗಿದೆ. ಜೈಲಿನ ಆಸ್ಪತ್ರೆಯು ಕಳಪೆ ಸ್ಥಿತಿಯಲ್ಲಿದ್ದು, ಸುಸಜ್ಜಿತವಾಗಿಲ್ಲ. ಅಲ್ಲಿ ವಾಜೆ ಅವರಿಗೆ ಸೋಂಕು ತಗಲುವ ಅಪಾಯವಿದೆ ಎಂದು ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.