ADVERTISEMENT

₹50 ಲಕ್ಷ ಮಾನನಷ್ಟ ನೀಡುವಂತೆ ಟಿಎಂಸಿ ನಾಯಕ ಸಾಕೇತ್‌ ಗೋಖಲೆಗೆ ನಿರ್ದೇಶನ

ಲಕ್ಷ್ಮೀ ಪುರಿ ವಿರುದ್ಧ ಅಪಮಾನಕಾರಿ ಟ್ವೀಟ್‌ ಮಾಡಿದ್ದ ಪ್ರಕರಣ

ಪಿಟಿಐ
Published 1 ಜುಲೈ 2024, 13:57 IST
Last Updated 1 ಜುಲೈ 2024, 13:57 IST
ಸಾಕೇತ್‌ ಗೋಖಲೆ
ಸಾಕೇತ್‌ ಗೋಖಲೆ   

ನವದೆಹಲಿ: ಮಾನಹಾನಿ ಟ್ವೀಟ್‌ಗೆ ಸಂಬಂಧಿಸಿದಂತೆ ಮಾಜಿ ರಾಜತಾಂತ್ರಿಕ ಅಧಿಕಾರಿ ಲಕ್ಷ್ಮೀ ಮುರ್ಡೇಶ್ವರ್‌ ಪುರಿ ಅವರ ಬಳಿ ಕ್ಷಮೆಯಾಚನೆ ಮಾಡಿ, ₹50 ಲಕ್ಷ ಪರಿಹಾರ ನೀಡಬೇಕು ಎಂದು ದೆಹಲಿ ಹೈಕೋರ್ಟ್‌ ಸೋಮವಾರ ಟಿಎಂಸಿ ನಾಯಕ ಸಾಕೇತ್‌ ಗೋಖಲೆ ಅವರಿಗೆ ಆದೇಶಿಸಿದೆ.

ಮಾನನಷ್ಟ ಪ್ರಕರಣದ ವಿಚಾರಣೆ  ನಡೆಸಿದ ನ್ಯಾಯಾಮೂರ್ತಿ ಅನೂಪ್ ಜೈರಾಮ್‌ ಭಂಭಾನಿ ಅವರು, ಈ ಸಂಬಂಧ ಗೋಖಲೆ ಅವರು ಯಾವುದೇ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಂತೆ ನಿರ್ಬಂಧ ಹೇರಿದ್ದಾರೆ.  

ಕೇಂದ್ರ ಸಚಿವ ಹರ್ದೀಪ್ ಸಿಂಗ್‌ ಪುರಿ ಅವರ ಪತ್ನಿಯೂ ಆದ ಲಕ್ಮೀ ಅವರು ಸ್ವಿಡ್ಜರ್ಲೆಂಡ್‌ನಲ್ಲಿ ಆಸ್ತಿ ಖರೀದಿಸಿರುವುದನ್ನು ಉಲ್ಲೇಖಿಸಿ ಸಾಕೇತ್‌ ಗೋಖಲೆ ಟ್ವೀಟ್‌ ಮಾಡಿದ್ದರು. ‘ಸಾಕೇತ್‌ ಅವರು ಸುಳ್ಳು ಮಾಹಿತಿಗಳನ್ನು ಹಂಚಿಕೊಂಡು ನನ್ನ ಘನತೆಗೆ ದಕ್ಕೆ ತರುತ್ತಿದ್ದಾರೆ’ ಎಂದು ಆರೋಪಿಸಿ ಲಕ್ಮೀ ಅವರು ₹5 ಕೋಟಿ ಮಾನನಷ್ಟ ಕೋರಿ 2021ರಲ್ಲಿ ಮೊಕದ್ದಮೆ ಹೂಡಿದ್ದರು. 

ADVERTISEMENT

‘ಗೋಖಲೆ ಅವರು, ಮೊದಲಿಗೆ ತಾವು ಈ ಹಿಂದೆ ಟ್ವೀಟ್‌ ಮಾಡಿದ್ದ ಖಾತೆಯ ಮೂಲಕ ಮತ್ತು ದಿನಪತ್ರಿಕೆಗಳ ಮೂಲಕ ಕ್ಷಮೆಯಾಚನೆ ಮಾಡಬೇಕು. ಆ ಟ್ವೀಟ್‌ ಅನ್ನು 6 ತಿಂಗಳು ಅಳಿಸಿ ಹಾಕುವಂತಿಲ್ಲ. ದೂರುದಾರರು ಅನುಭವಿಸಿರುವ ಮಾನಸಿಕ ವೇದನೆಗೆ ಪರಿಹಾರವಾಗಿ 8 ವಾರಗಳಲ್ಲಿ ₹50 ಲಕ್ಷ ಪರಿಹಾರ ನೀಡಬೇಕು’ ಎಂದು ಕೋರ್ಟ್‌ ಆದೇಶಿಸಿದೆ.

‘ವ್ಯಕ್ತಿಯ ಹಣಕಾಸಿನ ವ್ಯವಹಾರದ ಬಗ್ಗೆ ತಪ್ಪು ಮಾಹಿತಿ ನೀಡುವುದರಿಂದ ಅವರ ಘನತೆಗೆ ದಕ್ಕೆ ಉಂಟಾಗುತ್ತದೆ. ಆಗಿರುವ ಅಪಮಾನವನ್ನು ಸರಿದೂಗಿಸಲು ಸಾಧ್ಯವಾಗದಿದ್ದರೂ ಕನಿಷ್ಠ ಕ್ಷಮೆಯನ್ನಾದರೂ ಕೋರಬೇಕು’ ಎಂದು ಕೋರ್ಟ್‌ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.