ಕೋಲ್ಕತ್ತ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಎಲ್ಲ ಬಗೆಯ ಮಾಧ್ಯಮ ಪ್ರಚಾರವನ್ನು ಈ ಕೂಡಲೇ ನಿಲ್ಲಿಸಬೇಕು ಎಂದು ಕೋಲ್ಕತ್ತ ಹೈಕೋರ್ಟ್ ಸೋಮವಾರ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚನೆ ನೀಡಿದೆ.
ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ನ್ಯಾಯಾಲಯ ತನ್ನ ಅಂತಿಮ ತೀರ್ಪು ನೀಡುವ ವರೆಗೆ ಯಾವುದೇ ಬಗೆಯ ಪ್ರಚಾರವನ್ನು ಮಾಧ್ಯಮಗಳಲ್ಲಿ ಮಾಡಬಾರದು ಎಂದು ಮುಖ್ಯನ್ಯಾಯಮೂರ್ತಿ ಟಿಬಿಎನ್ ರಾಧಾಕೃಷ್ಣನ್ ಮತ್ತು ನ್ಯಾ. ಅರಿಜಿತ್ ಬ್ಯಾನರ್ಜಿ ಅವರು ಮಮತಾ ಸರ್ಕಾರಕ್ಕೆ ತಿಳಿಸಿದ್ದಾರೆ.
ಸಾರ್ವಜನಿಕರ ತೆರಿಗೆ ಹಣವನ್ನು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂಬ ಅರ್ಜಿದಾರರ ದೂರಿನ ಕುರಿತು ಹೈಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರದಿಂದ ವಿಸ್ತೃತ ವರದಿಯನ್ನೂ ಕೇಳಿದೆ.
ಪಶ್ಚಿಮ ಬಂಗಾಳ ಸರ್ಕಾರ ಕಾಯ್ದೆ ವಿರುದ್ಧ ಮಾಧ್ಯಮಗಳಲ್ಲಿ ಪ್ರಚಾರ ಕೈಗೊಂಡಿದೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ, ರೈಲ್ವೆ ಆಸ್ತಿ ಹಾನಿಯಾಗುತ್ತಿದೆ ಎಂದು ಸಲ್ಲಿಕೆಯಾದ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್‌ನ ಪೀಠ ಸೋಮವಾರ ವಿಚಾರಣೆ ನಡೆಸಿತು. ಅರ್ಜಿಗಳ ಮುಂದಿನ ವಿಚಾರಣೆಯನ್ನು ಕೋರ್ಟ್ ಮುಂದಿನ ವರ್ಷ ಜ.9ಕ್ಕೆ ನಿಗದಿ ಮಾಡಿತು.
ಇದೇ ವೇಳೆ ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣ ಸರ್ಕಾರದ ನಿಯಂತ್ರಣದಲ್ಲಿದೆ. ಕಡಿತಗೊಂಡಿದ್ದ ಮೊಬೈಲ್ ಸೇವೆಯನ್ನು ಪುನರ್ ಸ್ಥಾಪಿಸಲಾಗಿದೆ ಎಂದು ಅಡ್ವೊಕೇಟ್ ಜನರಲ್ ಕಿಶೋರ್ ದತ್ತ ಅವರು ಕೋರ್ಟ್‌ಗೆ ತಿಳಿಸಿದರು.
ಇನ್ನು ರೈಲ್ವೆ ಇಲಾಖೆಗೂ ನ್ಯಾಯಾಲಯ ನಿರ್ದೇಶನವೊಂದನ್ನು ನೀಡಿದ್ದು, ರೈಲ್ವೆ ಆಸ್ತಿ ರಕ್ಷಣೆಗೆ ಕೈಗೊಂಡ ಕ್ರಮಗಳೇನು? ಪ್ರತಿಭಟನೆ ವೇಳೆ ಸಂಭವಿಸಿದ ಆಸ್ತಿನಷ್ಟದ ಅಂದಾಜು ಮೊತ್ತದ ಕುರಿತು ವಿವರಣೆ ನೀಡುವಂತೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.