ADVERTISEMENT

‘ಬ್ಯಾಡ್‌ ಬಾಯ್‌ ಬಿಲಿಯನೇರ್ಸ್‌’ ಸಾಕ್ಷ್ಯಚಿತ್ರದ ಪೂರ್ವವೀಕ್ಷಣೆಗೆ ನಕಾರ

ಪಿಎನ್‌ಬಿ ವಂಚನೆ ಪ್ರಕರಣದ ಆರೋಪಿ ಮೆಹುಲ್‌ ಚೋಕ್ಸಿ ಅರ್ಜಿ ವಜಾ

ಪಿಟಿಐ
Published 28 ಆಗಸ್ಟ್ 2020, 15:38 IST
Last Updated 28 ಆಗಸ್ಟ್ 2020, 15:38 IST
ಮೆಹುಲ್‌ ಚೋಕ್ಸಿ
ಮೆಹುಲ್‌ ಚೋಕ್ಸಿ   

ನವದೆಹಲಿ: ನೆಟ್‌ಫ್ಲಿಕ್ಸ್‌ನ ‘ಬ್ಯಾಡ್‌ ಬಾಯ್ಸ್‌ ಬಿಲಿಯನೇರ್ಸ್‌’ ಸಾಕ್ಷ್ಯಚಿತ್ರವನ್ನು ಬಿಡುಗಡೆಗೂ ಮುನ್ನವೇ ವೀಕ್ಷಿಸಬೇಕು (ಪ್ರಿ–ಸ್ಕ್ರೀನಿಂಗ್‌) ಎಂದು ಕೋರಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ)ವಂಚನೆ ಪ್ರಕರಣದ ಆರೋಪಿ ಮೆಹುಲ್‌ ಚೋಕ್ಸಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.

‘ನನ್ನ ಅಭಿಪ್ರಾಯದಂತೆ ಖಾಸಗಿ ಹಕ್ಕನ್ನು ನಿರ್ಬಂಧಿಸುವುದು ಸಮರ್ಥನೀಯವಲ್ಲ. ಈ ವಿಚಾರದಲ್ಲಿ ನೀವು ಖಾಸಗಿ ಸಿವಿಲ್‌ ಸೂಟ್‌ ದಾಖಲಿಸುವುದು ಸೂಕ್ತ. ಹೀಗಾಗಿ ಅರ್ಜಿ ವಜಾಗೊಳಿಸಲಾಗಿದೆ’ ಎಂದು ನ್ಯಾಯಮೂರ್ತಿ ನವೀನ್‌ ಚಾವ್ಲ ಹೇಳಿದರು.

₹ 13,400 ಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ನೀರವ್‌ ಮೋದಿಯ ಸಹೋದರನ ಮಗನಾಗಿರುವ ಚೋಕ್ಸಿ, ಗೀತಾಂಜಲಿ ಜೆಮ್ಸ್‌ನ ಪ್ರವರ್ತಕರಾಗಿದ್ದರು. ವಂಚನೆ ಬೆಳಕಿಗೆ ಬರುತ್ತಿದ್ದಂತೆಯೇ ಭಾರತದಿಂದ ಪರಾರಿಯಾಗಿದ್ದ ಚೋಕ್ಸಿ,ಆ್ಯಂಟಿಗುವಾ ಹಾಗೂ ಬರ್ಬುಡಾದ ಪೌರತ್ವ ಪಡೆದಿದ್ದರು.

ಸೆ.2ರಂದು ಈ ಸಾಕ್ಷ್ಯಚಿತ್ರ ಬಿಡುಗಡೆಯಾಗಲಿದ್ದು, ಇತ್ತೀಚೆಗೆ ಭಾರತದಲ್ಲಿ ನಡೆದ ಬ್ಯಾಂಕ್‌ ವಂಚನೆ ಪ್ರಕರಣಗಳ ತನಿಖಾ ಸಾಕ್ಷ್ಯಚಿತ್ರವಾಗಿದೆ.

ಸಾಕ್ಷ್ಯಚಿತ್ರದ ಪ್ರೀ–ಸ್ಕ್ರೀನಿಂಗ್‌ ಅನ್ನು ನೆಟ್‌ಫ್ಲಿಕ್ಸ್‌ ವಿರೋಧಿಸಿತ್ತು. ನೆಟ್‌ಫ್ಲಿಕ್ಸ್‌ ಪರವಾಗಿ ವಾದಿಸಿದ್ದ ಹಿರಿಯ ವಕೀಲರಾದ ನೀರಜ್‌ ಕಿಶನ್‌ ಕೌಲ್‌ ಹಾಗೂ ದಯಾನ್‌ ಕೃಷ್ಣನ್‌, ‘ಚೋಕ್ಸಿ ಭಾರತದಿಂದ ಪರಾರಿಯಾಗಿದ್ದಾರೆ. ಅವರಿಗೆ ಸಾಕ್ಷ್ಯಚಿತ್ರವನ್ನು ಮೊದಲೇ ತೋರಿಸುವುದು ವಾಕ್ ‌ಸ್ವಾತಂತ್ರ್ಯವನ್ನು ಕಿತ್ತುಕೊಂಡಂತೆ’ ಎಂದಿದ್ದರು. ‘ನಾನು ತಲೆಮರೆಸಿಕೊಂಡಿರುವವನಲ್ಲ. ಸಾಕ್ಷ್ಯಚಿತ್ರ ವೀಕ್ಷಣೆಗೆ ಅವಕಾಶ ನೀಡಿ ನನ್ನನ್ನು ರಕ್ಷಿಸಬೇಕು. ಅಮೆರಿಕದ ಕಂಪನಿಯಾದ ನೆಟ್‌ಫ್ಲಿಕ್ಸ್‌ ಭಾರತದ ಸಂವಿಧಾನ ಹಾಗೂ ಕಾನೂನನ್ನು ಗೌರವಿಸಬೇಕು. ಇಲ್ಲವಾದಲ್ಲಿ ಅದನ್ನೂ ಚೀನಾದ ಆ್ಯಪ್‌ಗಳಂತೆ ನಿರ್ಬಂಧಿಸಬೇಕು’ ಎಂದು ಚೋಕ್ಸಿ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.