ಮುಂಬೈ: ಎಲ್ಗಾರ್ ಪರಿಷತ್– ಮಾವೊ ಸಂಪರ್ಕ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಮುಂಬೈನ ತಲೋಜಾ ಜೈಲಿನಲ್ಲಿರುವ ಸಾಮಾಜಿಕ ಕಾರ್ಯಕರ್ತ ಆನಂದ್ತೇಲ್ತುಂಬ್ಡೆ ಅವರಿಗೆ ಬಾಂಬೆ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿಗಳಾದ ಎ.ಎಸ್. ಗಡ್ಕರಿ ಮತ್ತು ಎಂ.ಎನ್. ಜಾಧವ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ‘ಆನಂದ್ ವಿರುದ್ಧ ಮಾಡಿರುವ ಆರೋಪದ ಪ್ರಕಾರ ಭಯೋತ್ಪಾದನೆ ಸಂಘಟನೆಗಳೊಂದಿಗೆ ಸಂಪರ್ಕ ಮತ್ತು ಅದಕ್ಕೆ ಬೆಂಬಲ ನೀಡಿರುವುದಕ್ಕೆ ಸಂಬಂಧಿಸಿದ ಒಂದೇ ಪ್ರಕರಣವಿದೆ. ಇದಕ್ಕೆ ಗರಿಷ್ಠ 10 ವರ್ಷ ಜೈಲು ಶಿಕ್ಷೆ ಇದೆ. ಆರೋಪಿಯು ಈಗಾಗಲೇ ಎರಡು ವರ್ಷ ಜೈಲಿನಲ್ಲಿ ಕಳೆದಿದ್ದಾರೆ ಎಂಬುದನ್ನು ಗಮನಿಸಲಾಗಿದೆ’ ಎಂದು ತಿಳಿಸಿದೆ.
ಜಾಮೀನು ಮಂಜೂರು ಮಾಡಿರುವುದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲುರಾಷ್ಟ್ರೀಯ ತನಿಖಾ ಸಂಸ್ಥೆಗೆ(ಎನ್ಐಎ) ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ, ಬಾಂಬೆ ಹೈಕೋರ್ಟ್ ತನ್ನ ಜಾಮೀನು ಆದೇಶಕ್ಕೆ ಒಂದು ವಾರ ಕಾಲ ತಡೆಯೊಡ್ಡಿದೆ.
ಅಲ್ಲಿಯ ತನಕ ಆನಂದ್ ಅವರು ಜೈಲಿನಿಂದ ಹೊರಬರುವಂತಿಲ್ಲ. ಆನಂದ್ ತೇಲ್ತುಂಬ್ಡೆ ಅವರು, ಅಂಬೇಡ್ಕರ್ ಅವರ ಮೊಮ್ಮಗಳಾದ ರಮಾಬಾಯಿ ಅಂಬೇಡ್ಕರ್ ಅವರ ಪತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.