ADVERTISEMENT

ಉದ್ಧವ್ ಠಾಕ್ರೆ ವಿರುದ್ಧ ಕ್ಷುಲ್ಲಕ ಆರೋಪ; ನಾಂದೇಡ್ ನಿವಾಸಿಗೆ ₹2 ಲಕ್ಷ ದಂಡ

ಪಿಟಿಐ
Published 1 ಸೆಪ್ಟೆಂಬರ್ 2024, 8:07 IST
Last Updated 1 ಸೆಪ್ಟೆಂಬರ್ 2024, 8:07 IST
<div class="paragraphs"><p>ಬಾಂಬೆ ಹೈಕೋರ್ಟ್ </p></div>

ಬಾಂಬೆ ಹೈಕೋರ್ಟ್

   

-ಪಿಟಿಐ ಚಿತ್ರ

ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಶಿವಸೇನಾ(ಯುಟಿಬಿ) ಮುಖಸ್ಥ ಉದ್ಧವ್ ಠಾಕ್ರೆ ವಿರುದ್ಧ ಕ್ಷುಲ್ಲಕ ಆರೋಪ ಹೊರಿಸಿ ಅರ್ಜಿ ಸಲ್ಲಿಸಿದ್ದಕ್ಕಾಗಿ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠವು ನಾಂದೇಡ್‌ನ ನಿವಾಸಿಯೊಬ್ಬರಿಗೆ ₹2 ಲಕ್ಷ ದಂಡ ವಿಧಿಸಿದೆ. ಅಲ್ಲದೇ ಈ ಮೊತ್ತವನ್ನು ಡಿಡಿ (ಡಿಮ್ಯಾಂಡ್ ಡ್ರಾಫ್ಟ್) ರೂಪದಲ್ಲಿ ವೈಯಕ್ತಿಕವಾಗಿ ಠಾಕ್ರೆ ಅವರಿಗೆ ನೀಡುವಂತೆಯೂ ಸೂಚಿಸಿದೆ.

ADVERTISEMENT

‘ಸಮಾರಂಭವೊಂದರಲ್ಲಿ ನಮ್ಮ ಪುರೋಹಿತರು ನೀಡಿದ ವಿಭೂತಿಯನ್ನು ಹಚ್ಚಿಕೊಳ್ಳದೇ ಠಾಕ್ರೆ ನನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ’ ಎಂದು ಆರೋಪಿಸಿ ಬಂಜಾರ ಸಮುದಾಯಕ್ಕೆ ಸೇರಿದ ಮೋಹನ್ ಚವಾಣ್‌ ಎಂಬವರು ಠಾಕ್ರೆ ವಿರುದ್ಧ ದೂರು ಸಲ್ಲಿಸಿದ್ದರು.

‘ಕಾನೂನಿನ ಬಗ್ಗೆ ಸ್ವಲ್ಪವೂ ಜ್ಞಾನವಿಲ್ಲದ ವ್ಯಕ್ತಿ ಸಹ ಇದು ಕಾನೂನಿನ ಸ್ಪಷ್ಟ ದುರುಪಯೋಗ ಎಂದು ಹೇಳುತ್ತಾನೆ’ ಎಂದು ಚವಾಣ್ ಅರ್ಜಿಯ ಕುರಿತು ನ್ಯಾಯಮೂರ್ತಿ ಎಸ್. ಜಿ. ಮೆಹರೆ ಅವರ ಏಕಸದಸ್ಯ ಪೀಠವು ಅಸಮಾಧಾನ ಹೊರಹಾಕಿದೆ.

‘ಠಾಕ್ರೆ ವಿರುದ್ಧ ಹೊರಿಸಲಾದ ಆರೋಪಗಳು ಕ್ಷುಲ್ಲಕವಾಗಿದ್ದು, ಆಧಾರ ರಹಿತವಾಗಿವೆ. ಕಾನೂನಿನ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುವವರಿಗೆ ದಂಡವನ್ನು ವಿಧಿಸಲು ಇದು ಸೂಕ್ತವಾದ ಪ್ರಕರಣವಾಗಿದೆ’ ಎಂದು ಪೀಠ ತಿಳಿಸಿದೆ.

‘ಅರ್ಜಿದಾರರು (ಚವಾಣ್) ಠಾಕ್ರೆ ಅವರ ಹೆಸರಿನಲ್ಲಿ ಡಿಡಿ (ಡಿಮಾಂಡ್ ಡ್ರಾಫ್ಟ್) ಖರೀದಿಸಿ, ಖುದ್ದಾಗಿ ಅವರ ಮನೆಗೆ ಹೋಗಿ ಅದನ್ನು ಅವರ ಕೈಗೆ ಅಥವಾ ಅವರು ನಿರ್ದೇಶಿಸುವ ವ್ಯಕ್ತಿಗೆ ತಲುಪಿಸಬೇಕು’ ಎಂದು ಪೀಠ ತಿಳಿಸಿದೆ. ಮೊತ್ತವನ್ನು ಪಾವತಿಸದಿದ್ದರೆ ಕಠಿಣ ಕ್ರಮದ ಎಚ್ಚರಿಕೆಯನ್ನೂ ನೀಡಿದೆ.

ಪ್ರಕರಣದ ಹಿನ್ನೆಲೆ:

ಸಮಾರಂಭವೊಂದಕ್ಕೆ ನಮ್ಮ ಪುರೋಹಿತರು ಠಾಕ್ರೆಯವರ ಮನೆಗೆ ಹೋಗಿದ್ದರು. ಈ ಸಂದರ್ಭದಲ್ಲಿ ಠಾಕ್ರೆಯವರಿಗೆ ಪ್ರಸಾದ ಮತ್ತು ವಿಭೂತಿಯನ್ನು ನೀಡಿದ್ದರು. ಅದನ್ನು ಸ್ವೀಕರಿಸಿದ ಠಾಕ್ರೆ ಅವರು, ವಿಭೂತಿಯನ್ನು ತಮ್ಮ ಹಣೆಯ ಮೇಲೆ ಲೇಪಿಸಿಕೊಳ್ಳುವ ಬದಲು ಅದನ್ನು ತನ್ನ ಪಕ್ಕದಲ್ಲಿ ನಿಂತಿರುವ ಇನ್ನೊಬ್ಬ ವ್ಯಕ್ತಿಗೆ ನೀಡುತ್ತಾರೆ. ಇದು ತನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ದೂರಿನಲ್ಲಿ ತಿಳಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಕ್ರೆ ವಿರುದ್ಧ ಚವಾಣ್‌ ಸಲ್ಲಿಸಿದ್ದ ಖಾಸಗಿ ದೂರನ್ನು ನಾಂದೇಡ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಜಾಗೊಳಿಸಿತ್ತು. ಅದಾದ ಬಳಿಕ ಸೆಷನ್ಸ್‌ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅಲ್ಲಿಯೂ ಅರ್ಜಿ ವಜಾಗೊಂಡಿದ್ದು, ನಂತರ ಚವಾಣ್‌ ಹೈಕೋರ್ಟ್ ಮೆಟ್ಟಿಲೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.