ಮುಂಬೈ: ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದ 11 ವರ್ಷದ ಬಾಲಕಿಯೊಬ್ಬಳು ಸದ್ಯ 30 ವಾರಗಳ ಗರ್ಭಿಣಿಯಾಗಿದ್ದು, ಗರ್ಭಪಾತ ಮಾಡಿಸಿಕೊಳ್ಳಲು ಬಾಂಬೆ ಹೈಕೋರ್ಟ್ ಆಕೆಗೆ ಗುರುವಾರ ಅನುಮತಿ ನೀಡಿದೆ.
ನ್ಯಾಯಮೂರ್ತಿಗಳಾದ ಶರ್ಮಿಳಾ ದೇಶ್‌ಮುಖ್ ಹಾಗೂ ಜಿತೇಂದ್ರ ಜೈನ್ ಅವರಿದ್ದ ರಜಾ ಕಾಲದ ಪೀಠವು, ಇಲ್ಲಿನ ಜೆ.ಜೆ. ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರವೇ ಗರ್ಭಪಾತ ಮಾಡಿಸಿಕೊಳ್ಳುವಂತೆ ಬಾಲಕಿಗೆ ಸೂಚಿಸಿತು.
ಅರ್ಜಿದಾರ ಬಾಲಕಿಗೆ ವೈದ್ಯಕೀಯ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ನೀಡಲಾಗಿದೆ ಎಂದು ಪೀಠ ತಿಳಿಸಿದೆ. ಅಲ್ಲದೆ, ಅತ್ಯಾಚಾರ ಪ್ರಕರಣದ ವಿಚಾರಣೆಗೆ ಅಗತ್ಯವಿರುವ ಡಿಎನ್‌ಎ ಅಥವಾ ಇತರ ಪರೀಕ್ಷೆಗಳಿಗೆ ನೆರವಾಗಲು ಭ್ರೂಣದ ರಕ್ತ ಮತ್ತು ಅಂಗಾಂಶದ ಮಾದರಿಯನ್ನು ಸಂಗ್ರಹಿಸಿಟ್ಟುಕೊಳ್ಳುವಂತೆಯೂ ಸೂಚಿಸಿದೆ.
‘ವೈದ್ಯಕೀಯ ಗರ್ಭಪಾತದ ವೇಳೆ ಮಗುವೇನಾದರೂ ಜೀವಂತವಾಗಿದ್ದರೆ, ಅದಕ್ಕೆ ಎಲ್ಲ ರೀತಿಯ ವೈದ್ಯಕೀಯ ಚಿಕಿತ್ಸೆಗಳನ್ನು ನೀಡಿ ಪೋಷಿಸಬೇಕು. ಮಗುವನ್ನು ಸಾಕಲು ಅರ್ಜಿದಾರರು ಅಥವಾ ಆಕೆಯ ಪೋಷಕರು ಒಲವು ತೋರದಿದ್ದಲ್ಲಿ, ಮಗುವಿನ ಪಾಲನೆ–ಪೋಷಣೆಯ ಸಂಪೂರ್ಣ ಹೊಣೆಯನ್ನು ಸರ್ಕಾರವೇ ಹೊತ್ತುಕೊಳ್ಳಬೇಕು’ ಎಂದೂ ಸೂಚಿಸಿದೆ.
ವೈದ್ಯಕೀಯ ಗರ್ಭಪಾತ ಕಾಯ್ದೆಯ ಪ್ರಕಾರ 20 ವಾರಗಳು ತುಂಬಿರುವ ಭ್ರೂಣ ತೆಗೆಸಲು ಕೋರ್ಟ್ ಅನುಮತಿ ಕಡ್ಡಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.