ADVERTISEMENT

400 ಸಸಿ ನೆಟ್ಟು ನಕಾರಾತ್ಮಕ ಶಕ್ತಿ ಕೊನೆಗಾಣಿಸಿ: ದೆಹಲಿ ಹೈಕೋರ್ಟ್‌

ಎರಡು ಕುಟುಂಬಗಳ ವಿರುದ್ಧದ ಎಫ್‌ಐಆರ್‌ ರದ್ದುಪಡಿಸಿದ ದೆಹಲಿ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 29 ಜುಲೈ 2023, 13:35 IST
Last Updated 29 ಜುಲೈ 2023, 13:35 IST
   

ನವದೆಹಲಿ: ಕ್ಷುಲ್ಲಕ ವಿಷಯಕ್ಕಾಗಿ ಬಡಿದಾಡಿಕೊಂಡು ನಂತರ, ವ್ಯಾಜ್ಯ ಬಗೆಹರಿಸಿಕೊಂಡಿದ್ದ ಎರಡು ಕುಟುಂಬಗಳ ಸದಸ್ಯರಿಗೆ 400 ಸಸಿಗಳನ್ನು ನೆಡುವ ಮೂಲಕ ಅವರೊಳಗಿನ ‘ನಕಾರಾತ್ಮಕ ಶಕ್ತಿ’ಯನ್ನು ಕೊನೆಗಾಣಿಸುವಂತೆ ದೆಹಲಿ ಹೈಕೋರ್ಟ್‌ ಸೂಚಿಸಿದೆ.

ಆರು ವರ್ಷಗಳ ಹಿಂದಿನ ಪ್ರಕರಣದಲ್ಲಿ, ಎರಡು ಕುಟುಂಬಗಳ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗಳನ್ನು ಕೂಡ ಹೈಕೋರ್ಟ್‌ ರದ್ದುಗೊಳಿಸಿದೆ.

ಎರಡೂ ಕುಟುಂಬಗಳು ತಾವು ವಾಸಿಸುವ ಪ್ರದೇಶದಲ್ಲಿ ತಲಾ 200 ಸಸಿಗಳನ್ನು ನೆಟ್ಟು, ಐದು ವರ್ಷಗಳವರೆಗೆ ಅವುಗಳ ಪೋಷಣೆ ಮಾಡಬೇಕು ಎಂದು ನ್ಯಾಯಮೂರ್ತಿ ದಿನೇಶ್‌ಕುಮಾರ್‌ ಶರ್ಮಾ ನಿರ್ದೇಶನ ನೀಡಿದ್ದಾರೆ.

ADVERTISEMENT

‘ತೋಟಗಾರಿಕೆ ಇಲಾಖೆ ಜೊತೆ ಸಮಾಲೋಚನೆ ನಡೆಸಿದ ಬಳಿಕ ಸಸಿಗಳನ್ನು ನೆಡುವ ಪ್ರದೇಶ ಕುರಿತು ತನಿಖಾಧಿಕಾರಿ ನಿರ್ಧಾರ ಕೈಗೊಳ್ಳಬೇಕು. 15 ದಿನಗಳ ಮುಂಚಿತವಾಗಿ ಈ ಕುರಿತು ಅರ್ಜಿದಾರರಿಗೆ ಅವರು ಮಾಹಿತಿ ನೀಡಬೇಕು’ ಎಂದೂ ನ್ಯಾಯಮೂರ್ತಿ ಶರ್ಮಾ ಸೂಚಿಸಿದ್ದಾರೆ.

‘ಸಸಿಗಳ ನಿರ್ವಹಣೆ ಕುರಿತು ಮೇಲ್ವಿಚಾರಣೆಗಾಗಿ ಜಿಯೊ–ಟ್ಯಾಗ್‌ ಅಳವಡಿಸಲು ಸಾಧ್ಯವೇ ಎಂಬ ಬಗ್ಗೆಯೂ ತನಿಖಾಧಿಕಾರಿ ಪರಿಶೀಲಿಸಬೇಕು. ಕ್ರಮ ಕೈಗೊಂಡ ಬಗ್ಗೆ ನವೆಂಬರ್‌ನಲ್ಲಿ ವರದಿ ಸಲ್ಲಿಸಬೇಕು’ ಎಂದು ಹೇಳಿದ್ದಾರೆ.

ಪ್ರಕರಣವೇನು: ಆರು ವರ್ಷಗಳ ಹಿಂದಿನ ಪ್ರಕರಣವಿದು. ‘2017ರ ಮಾರ್ಚ್ 4ರಂದು ಆ ಕುಟುಂಬದ (ಪ್ರತಿವಾದಿಗಳು) ಮೂವರು ನನ್ನ ಮನೆಗೆ ಬಂದಿದ್ದರು. ರಾಜಕೀಯ ಪಕ್ಷವೊಂದರ ಅಭ್ಯರ್ಥಿ ವಿತರಿಸುತ್ತಿರುವ ಹೊದಿಕೆಗಳನ್ನು ನೀಡುವ ಸಂಬಂಧ ಗುರುತಿನ ಚೀಟಿ ನೀಡುವಂತೆ ಕೇಳಿದ್ದರು’ ಎಂದು ದೂರುದಾರರು ಹೇಳಿದ್ದಾಗಿ ಮೊದಲ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿತ್ತು.

‘ಮನೆಗೆ ಬಂದಿದ್ದ ಮೂವರು ಬೇರೆ ರಾಜಕೀಯ ಪಕ್ಷವೊಂದರ ಬೆಂಬಲಿಗರಾಗಿದ್ದರಿಂದ ಅವರೊಂದಿಗೆ ಮಾತಿನ ಚಕಮಕಿ ನಡೆದು, ನಂತರ ಬಡಿದಾಟದಲ್ಲಿ ಅಂತ್ಯವಾಯಿತು’ ಎಂಬ ದೂರುದಾರರ ಹೇಳಿಕೆಯನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿತ್ತು.

ಪ್ರತಿವಾದಿಗಳ ನೀಡಿದ ದೂರಿನ ಅನ್ವಯ ದಾಖಲಾಗಿದ್ದ ಮತ್ತೊಂದು ಎಫ್‌ಐಆರ್‌ನಲ್ಲಿ, ‘ಹೊದಿಕೆಗಳ ವಿತರಣೆಗಾಗಿ ಗುರುತಿನ ಚೀಟಿಗಳನ್ನು ಸಂಗ್ರಹಿಸುತ್ತಿದ್ದಾಗ ಆ ಕುಟುಂಬದ (ದೂರುದಾರರು) ಸದಸ್ಯರು ಜಗಳ ಮಾಡಿ, ನಮ್ಮನ್ನು ಹೊಡೆದರು’ ಎಂದು ವಿವರಿಸಲಾಗಿತ್ತು.

ಕಳೆದ ಜನವರಿಯಲ್ಲಿ ಎರಡೂ ಕುಟುಂಬಗಳು ಸಂಧಾನ ಮಾಡಿಕೊಂಡಿದ್ದವು.

‘ಯಾವುದೇ ಭಯ, ಒತ್ತಡ ಅಥವಾ ಬಲವಂತವಿಲ್ಲದೇ, ಸ್ವಯಂ ಪ್ರೇರಿತವಾಗಿ ವಿಷಯವನ್ನು ಇತ್ಯರ್ಥಪಡಿಸಿಕೊಂಡಿದ್ದೇವೆ’ ಎಂದು ಕುಟುಂಬಗಳು ನ್ಯಾಯಾಲಯಕ್ಕೆ ತಿಳಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.