ADVERTISEMENT

ಎಫ್‌ಐಆರ್‌ ರದ್ದು: 150 ಬೇವಿನ ಗಿಡ ನೆಡಲು ದೆಹಲಿ ಹೈಕೋರ್ಟ್‌ ಸೂಚನೆ

ಪಿಟಿಐ
Published 9 ಆಗಸ್ಟ್ 2024, 23:38 IST
Last Updated 9 ಆಗಸ್ಟ್ 2024, 23:38 IST
   

ನವದೆಹಲಿ: ಸಂಬಂಧಿ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ ಆರೋಪದಡಿ ಮೂವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ಅನ್ನು ವಜಾಗೊಳಿಸಿದ ದೆಹಲಿ ಹೈಕೋರ್ಟ್‌, ಆರೋಪಿಗಳಿಗೆ ತಲಾ 50 ಬೇವಿನ ಸಸಿಗಳನ್ನು ನೆಡುವಂತೆ ಆದೇಶಿಸಿದೆ. 

‘ಯಾವುದೇ ಒತ್ತಡವಿಲ್ಲದೆ ದೂರುದಾರರು ಮತ್ತು ಆರೋಪಿಗಳು ಸೌಹಾರ್ದಯುತವಾಗಿ ವ್ಯಾಜ್ಯವನ್ನು ಪರಿಹರಿಸಿಕೊಂಡಿದ್ದಾರೆ. ಇದು ಕೌಟುಂಬಿಕ ಸಮಸ್ಯೆಯಾಗಿರುವುದರಿಂದ ಎಫ್‌ಐಆರ್‌ ಅನ್ನು ವಜಾಗೊಳಿಸಬಹುದು’ ಎಂದು ನ್ಯಾಯಾಧೀಶರು ತಿಳಿಸಿದರು.

‘ಕಕ್ಷಿದಾರರು ದಂಡ ಪಾವತಿಸುವ ಬದಲು ತಲಾ 50 ಬೇವಿನ ಸಸಿಗಳನ್ನು ನೆಡಬೇಕು. ಆ ಸಸಿಗಳು 3 ಅಡಿಗಿಂತ ಹೆಚ್ಚು ಎತ್ತರವನ್ನು ಹೊಂದಿರಬೇಕು ಮತ್ತು ಅರಣ್ಯ ಇಲಾಖೆ ಅಥವಾ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿಯೇ ಸಸಿ ನಾಟಿ ಮಾಡಬೇಕು’ ಎಂದು ಆದೇಶಿಸಿದ್ದಾರೆ.

ADVERTISEMENT

‘ಸಸಿ ನಾಟಿಯ ಫೊಟೊ ಜೊತೆಗೆ ಪೊಲೀಸ್‌ ಅಧಿಕಾರಿಗಳ ವರದಿಯನ್ನು 8 ವಾರಗಳ ಒಳಗಾಗಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಸಸಿಗಳ ನಿರ್ವಹಣೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಮಾಡಬೇಕು’ ಎಂದು ನ್ಯಾಯಾಲಯ ತಿಳಿಸಿದೆ.

‘ನ್ಯಾಯಾಲಯದ ಆದೇಶವನ್ನು ಪಾಲಿಸದಿದ್ದಲ್ಲಿ, ದೆಹಲಿ ಕಾನೂನು ಸೇವಾ ಪ್ರಾಧಿಕಾರಕ್ಕೆ ಕಕ್ಷಿದಾರರು ತಲಾ ₹50 ಸಾವಿರ ಪಾವತಿಸಬೇಕು’ ಎಂದು ಆದೇಶದಲ್ಲಿ ತಿಳಿಸಲಾಗಿದೆ. 

ಕಿರುಕುಳ, ಅವಹೇಳನ ಆರೋಪದಡಿ ತಮ್ಮ ಮೇಲೆ 2015ರಲ್ಲಿ ದಾಖಲಾಗಿದ್ದ ಎಫ್‌ಐಆರ್‌ ಅನ್ನು ರದ್ದುಗೊಳಿಸಬೇಕು ಎಂದು ಕೋರಿ ವ್ಯಕ್ತಿ ಮತ್ತು ಅವರ ಇಬ್ಬರು ಪುತ್ರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು. ತಾವು ವ್ಯಾಜ್ಯವನ್ನು ಪರಿಹರಿಸಿಕೊಂಡಿರುವುದಾಗಿ ದೂರುದಾರರು ಹೇಳಿಕೆ ನೀಡಿದ ಕಾರಣ ನ್ಯಾಯಾಲಯವು ಪ್ರಕರಣವನ್ನು ಕೈಬಿಟ್ಟಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.