ADVERTISEMENT

ಇಶ್ರತ್ ಜಹಾನ್ ಪ್ರಕರಣ: ಐಪಿಎಸ್ ಅಧಿಕಾರಿ ವಜಾ ಆದೇಶ ಪ್ರಶ್ನಿಸಿದ್ದ ಅರ್ಜಿ ತಿರಸ್ಕೃತ

ಪಿಟಿಐ
Published 24 ಮೇ 2023, 13:04 IST
Last Updated 24 ಮೇ 2023, 13:04 IST
ಇಶ್ರತ್
ಇಶ್ರತ್   

ನವದೆಹಲಿ: ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣದ ತನಿಖೆ ನಡೆಸಿದ್ದ ಐಪಿಎಸ್ ಅಧಿಕಾರಿ ಸತೀಶ್‌ಚಂದ್ರ ವರ್ಮಾ ಅವರನ್ನು ನಿವೃತ್ತಿಗಿಂತ ಮುನ್ನವೇ ಸೇವೆಯಿಂದ ವಜಾಗೊಳಿಸಿದ್ದ ಕೇಂದ್ರ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಬುಧವಾರ ತಿರಸ್ಕರಿಸಿದೆ.

‘ರಿಟ್ ಅರ್ಜಿಯು ವಿಚಾರಣೆಗೆ ಅರ್ಹವಾಗಿಲ್ಲದ ಕಾರಣ ತಿರಸ್ಕರಿಸುತ್ತಿದ್ದೇವೆ’ ಎಂದು ಮುಖ್ಯ ನ್ಯಾಯಮೂರ್ತಿ ಸತೀಶ್‌ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಂಜೀವ್ ಸಚ್‌ದೇವ್ ಅವರನ್ನೊಳಗೊಂಡ ಪೀಠ ಹೇಳಿದೆ. 

ವರ್ಮಾ ಅವರು 2022ರ ಸೆ. 30ರಂದು ನಿವೃತ್ತಿಯಾಗಬೇಕಿತ್ತು. ಆದರೆ, ಇಲಾಖೆಯ ವಿಚಾರಣೆಯಲ್ಲಿ ವರ್ಮಾ ಅವರು ಮಾಧ್ಯಮಗಳೊಂದಿಗೆ ಸಂವಹನ ನಡೆಸಿದ್ದು ಸೇರಿದಂತೆ ವಿವಿಧ ಆರೋಪಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿತ್ತು. ಈ ಕಾರಣಕ್ಕಾಗಿ ಅವರನ್ನು ನಿವೃತ್ತಿಗೂ ಒಂದು ತಿಂಗಳು ಮುನ್ನ ಅಂದರೆ 2022ರ ಆಗಸ್ಟ್ 30ರಂದು ಕೇಂದ್ರ ಸರ್ಕಾರವು ಸೇವೆಯಿಂದ ವಜಾಗೊಳಿಸಿತ್ತು. 

ADVERTISEMENT

ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕೇಂದ್ರದ ಕ್ರಮವನ್ನು ಪ್ರಶ್ನಿಸಿ ವರ್ಮಾ ಅವರು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 

ಏನಿದು ಪ್ರಕರಣ?: 2004ರ ಜೂನ್ 15ರಂದು ಮುಂಬೈ ಸಮೀಪದ ಮುಂಬ್ರಾ ನಿವಾಸಿಯಾಗಿದ್ದ ಇಶ್ರತ್ ಜಹಾನ್ ಮತ್ತು ಇತರ ಮೂವರನ್ನು ಅಹಮದಾಬಾದ್‌ನ ಹೊರವಲಯದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿತ್ತು. ಇವರು ಎಲ್‌ಇಟಿ ಉಗ್ರರಾಗಿದ್ದು, ಗುಜರಾತಿನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಲಾಗಿತ್ತು.  

ಈ ಪ್ರಕರಣವನ್ನು 2004ರಿಂದ 2010ರ ಏಪ್ರಿಲ್ ತನಕ ಆಗ ಸೇವೆಯಲ್ಲಿದ್ದ ಐಪಿಎಸ್ ಅಧಿಕಾರಿ ಸತೀಶ್‌ಚಂದ್ರ ವರ್ಮಾ ತನಿಖೆ ನಡೆಸಿದ್ದರು. ಆ ತನಿಖಾ ವರದಿಯನ್ನು ಆಧರಿಸಿ ವಿಶೇಷ ತನಿಖಾ ತಂಡವು ಇದು ‘ನಕಲಿ ಎನ್‌ಕೌಂಟರ್’ ಎನ್ನುವ ತೀರ್ಮಾನಕ್ಕೆ ಬಂದಿತ್ತು. 

ಬಳಿಕ ಗುಜರಾತ್ ಹೈಕೋರ್ಟ್ ಪ್ರಕರಣದ ತನಿಖೆ ನಡೆಸುವಂತೆ ಮತ್ತು ವರ್ಮಾ ಅವರ ಸೇವೆಯನ್ನು ಪಡೆದುಕೊಳ್ಳುವಂತೆ ಸಿಬಿಐಗೆ ನಿರ್ದೇಶನ ನೀಡಿತ್ತು.

ಸಂಬಂಧಿಸಿದ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ವರ್ಮಾ ಅವರು 2016ರ ಮಾರ್ಚ್ 2 ಮತ್ತು 3ರಂದು ಗುವಾಹಟಿಯಲ್ಲಿ ಪ್ರಕರಣದ ತನಿಖೆಗೆ ಸಂಬಂಧಿಸಿದ ವಿಷಯಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದರು. ಇದರಿಂದಾಗಿ ಕೇಂದ್ರ ಸರ್ಕಾರ ಮತ್ತು ಗುಜರಾತ್ ಸರ್ಕಾರಕ್ಕೆ ಇರಿಸುಮುರಿಸು ಉಂಟಾಗಿತ್ತು. ಈ ಸಂಬಂಧ ವರ್ಮಾ ಅವರನ್ನು ಇಲಾಖಾ ತನಿಖೆಗೊಳಪಡಿಸಲಾಗಿತ್ತು. ಆಗ ಅವರ ವಿರುದ್ಧದ ಆರೋಪಗಳು ಸತ್ಯವೆಂದು ಸಾಬೀತಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.