ADVERTISEMENT

ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿ: ಟ್ಯಾಟೂ ತೆಗೆಸಿದ ಅಭ್ಯರ್ಥಿ ಪರ ಹೈಕೋರ್ಟ್‌ ಆದೇಶ

ಪಿಟಿಐ
Published 18 ಆಗಸ್ಟ್ 2024, 15:27 IST
Last Updated 18 ಆಗಸ್ಟ್ 2024, 15:27 IST
   

ನವದೆಹಲಿ: ಬಲಗೈ ತೋಳಿನ ಮೇಲೆ ‘ಮಾಸಿದ ಟ್ಯಾಟೂ’ ಇದೆ ಎಂಬ ಕಾರಣಕ್ಕೆ ನೇಮಕಾತಿಯಿಂದ ಕೈಬಿಡಲಾಗಿದ್ದ ದೆಹಲಿ ಪೊಲೀಸ್ ಕಾನ್‌ಸ್ಟೆಬಲ್‌ ಅಭ್ಯರ್ಥಿಯೊಬ್ಬರ ನೆರವಿಗೆ ನಿಂತ ಹೈಕೋರ್ಟ್‌, ಅಭ್ಯರ್ಥಿಗೆ ಪೊಲೀಸ್‌ ಪಡೆ ಸೇರಲು ಅನುಮತಿ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದೆ.

ಅಭ್ಯರ್ಥಿಗೆ ಪರಿಹಾರ ನೀಡಿರುವ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಯ (ಸಿಎಟಿ) ಆದೇಶವನ್ನು ಪ್ರಶ್ನಿಸಿ ಸಿಬ್ಬಂದಿ ಆಯ್ಕೆ ಆಯೋಗ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಟ್ಯಾಟೂ ತೆಗೆಸಲು ಅಭ್ಯರ್ಥಿಯು ಈಗಾಗಲೇ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದನ್ನು ಗಮನಿಸಿದ್ದ ಹೈಕೋರ್ಟ್, ವಿಚಾರಣೆ ವೇಳೆ ಹಾಜರಾಗಲು ಸೂಚಿಸಿತ್ತು. ಅಭ್ಯರ್ಥಿಯ ಬಲ ಮುಂಗೈಯನ್ನು  ಪೀಠದಲ್ಲಿದ್ದ ನ್ಯಾಯಮೂರ್ತಿಗಳಾದ ಸುರೇಶ್‌ ಕುಮಾರ್‌ ಕೇತ್‌ ಮತ್ತು ಗಿರೀಶ್‌ ಕಟಪಾಳಿಯ ಅವರು ಖುದ್ದು ಗಮನಿಸಿದರು. 

ADVERTISEMENT

‘ನಾವು ಪ್ರತಿವಾದಿಯ (ಅಭ್ಯರ್ಥಿ) ಬಲ ಮುಂಗೈಯನ್ನು ಖುದ್ದು ನೋಡಿದ್ದೇವೆ. ಬರಿಗಣ್ಣಿಗೆ ಹಚ್ಚೆ ಸಹ ಗೋಚರಿಸುವುದಿಲ್ಲ. ಇದನ್ನು ಅರ್ಜಿದಾರರ (ಅಧಿಕಾರಿಗಳು) ಮತ್ತು ನ್ಯಾಯಾಲಯಕ್ಕೆ ಹಾಜರಾದ ಅಧಿಕಾರಿಗಳ ವಕೀಲರಿಗೆ ತೋರಿಸಲಾಗಿದೆ. ನಮ್ಮ ಪ್ರಕಾರ, ಪ್ರತಿವಾದಿಯ ಮುಂದೋಳಿನ ಮೇಲೆ ಸ್ಪಷ್ಟವಾಗಿ ಗೋಚರಿಸುವ ಟ್ಯಾಟೂ ಇಲ್ಲ. ಆದರೆ, ಟ್ಯಾಟೂ ಇದ್ದ ಜಾಗದಲ್ಲಿ ತುಂಬಾ ಮಂದವಾದ ಗಾಯವು ಗೋಚರಿಸುತ್ತದೆ. ಕೆಲವೊಮ್ಮೆ ಅಂತಹ ರೀತಿಯ ಗಾಯಗಳು ಸಹಜ. ಹಾಗಾಗಿ, ಅಭ್ಯರ್ಥಿಗಳನ್ನು ಆ ಕಾರಣಕ್ಕಾಗಿ ನೇಮಕಾತಿಯಿಂದ ಅನರ್ಹಗೊಳಿಸಲಾಗದು’ ಎಂದು ಜುಲೈ 24ರಂದು ನೀಡಿದ ಆದೇಶದಲ್ಲಿ ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

2023ರ ಸೆಪ್ಟೆಂಬರ್‌ನಲ್ಲಿ ಅಭ್ಯರ್ಥಿಯು ದೆಹಲಿ ಪೊಲೀಸ್‌ ಕಾನ್‌ಸ್ಟೆಬಲ್ ಹುದ್ದೆಗೆ ನೇರ ನೇಮಕಾತಿಗೆ ಅರ್ಜಿ ಸಲ್ಲಿಸಿದ್ದರು. ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ ಪಾಸಾಗಿ ನೇಮಕಾತಿಗೆ ಅರ್ಹತೆ ಪಡೆದಿದ್ದರು. ಬಿಎಸ್‌ಎಫ್ ಆಸ್ಪತ್ರೆಯಲ್ಲಿ ನಡೆಸಿದ ವೈದ್ಯಕೀಯ ಪರೀಕ್ಷೆ ವೇಳೆ ಟ್ಯಾಟೂ ಹಾಕಿಸಿಕೊಂಡಿರುವ ಕಾರಣಕ್ಕೆ ನೇಮಕಾತಿಗೆ ಅನರ್ಹರೆಂದು ಘೋಷಿಸಲಾಗಿತ್ತು. ಆಗ ಅಭ್ಯರ್ಥಿ ಸಿಎಟಿ ಮೊರೆ ಹೋಗಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.