ADVERTISEMENT

‘ನೀಟ್’ ಒಎಂಆರ್ ಶೀಟ್ ದುರ್ಬಳಕೆ: ದೆಹಲಿ ಹೈಕೋರ್ಟ್ ಆಘಾತ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2023, 16:36 IST
Last Updated 24 ಆಗಸ್ಟ್ 2023, 16:36 IST
   

ನವದೆಹಲಿ: ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕಾಗಿ ನಡೆಸಲಾಗುವ ನೀಟ್‌ (2023) ಪರೀಕ್ಷೆಯ ಒಎಂಆರ್ ಶೀಟ್‌ ಅನ್ನು ತಿರುಚಿದ ಯುವತಿಯೊಬ್ಬರ ಕ್ರಮಕ್ಕೆ ದೆಹಲಿ ಹೈಕೋರ್ಟ್ ಆಘಾತ ವ್ಯಕ್ತಪಡಿಸಿದ್ದು, ಯುವತಿಗೆ ₹20 ಸಾವಿರ ದಂಡ ವಿಧಿಸಿದ್ದು, ಮುಂದೆ ಇಂಥ ಕ್ರಮಗಳನ್ನು ನ್ಯಾಯಾಲಯವು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದೆ. 

‘ಯುವತಿಗೆ ₹ 2 ಲಕ್ಷ ಮೊತ್ತದ ದಂಡ ವಿಧಿಸುವ ಹಾಗೂ ಪೊಲೀಸರಿಗೆ ಮಾಹಿತಿ ನೀಡುವ ಉದ್ದೇಶ ಹೊಂದಿದ್ದೆ. ಆದರೆ, ಯುವತಿ ಇನ್ನೂ ಚಿಕ್ಕ ವಯಸ್ಸಿನವರಾಗಿರುವುದರಿಂದ ಅದನ್ನು ಪರಿಗಣಿಸಿ ಕ್ರಮಕ್ಕೆ ಮುಂದಾಗಲಿಲ್ಲ’ ಎಂದು ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ್ ಅವರು ತಿಳಿಸಿದ್ದಾರೆ.  

ಏನಿದು ಪ್ರಕರಣ?: ‘ನೀಟ್’ ಪರೀಕ್ಷೆ ಬರೆದಿದ್ದ ಆಂಧ್ರಪ್ರದೇಶದ ಯುವತಿಯೊಬ್ಬರು ಪರೀಕ್ಷೆಯಲ್ಲಿ ತಾವು ಶೇ 99.9ರಷ್ಟು ಅಂಕ ಗಳಿಸಿದ್ದೆ. ಆದರೆ, ವೈದ್ಯಕೀಯ ಕೋರ್ಸ್ ಪ್ರವೇಶ ಪಡೆಯಲು ಮೆಡಿಕಲ್ ಕೌನ್ಸೆಲಿಂಗ್ ಕಮಿಟಿ (ಎಂಸಿಸಿ) ವೆಬ್‌ಸೈಟ್‌ನಲ್ಲಿ ನೋಂದಾಯಿಸುವಾಗ ತಮ್ಮ ಅಂಕದ ಪ್ರಮಾಣವು ಶೇ 38.4ಕ್ಕೆ ಇಳಿಕೆಯಾಗಿದೆ. ಹಾಗಾಗಿ ಮೆಡಿಕಲ್ ಕೌನ್ಸೆಲಿಂಗ್ ಕಮಿಟಿ (ಎಂಸಿಸಿ) ಒಎಂಆರ್ ಶೀಟ್ ಅನ್ನು ಪ್ರಸ್ತುತಪಡಿಸಲು ನಿರ್ದೇಶನ ನೀಡಬೇಕೆಂದು ಕೋರಿ ದೆಹಲಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.  

ADVERTISEMENT

ಪ್ರಕರಣದ ವಿಚಾರಣೆ ವೇಳೆ, ವಾದ ಮಂಡಿಸಿದ ರಾಷ್ಟ್ರೀಯ ಪರೀಕ್ಷಾ ಆಯೋಗವು (ಎನ್‌ಟಿಎ), ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆಯುವ ಪ್ರಯತ್ನದ ಭಾಗವಾಗಿ ಅರ್ಜಿದಾರ ಯುವತಿಯು ಒಎಂಆರ್ ಶೀಟ್ ಅನ್ನು ತಿರುಚಿ, ಮಾರ್ಪಾಡಿಸಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿತು.

ಆದರೆ, ಇದನ್ನು ಒಪ್ಪದ ಯುವತಿಯು, ಎನ್‌ಟಿಎ ಸಲ್ಲಿಸಿರುವ ಒಎಂಆರ್ ಶೀಟ್ ಅಸಲಿಯಲ್ಲ. ತಾವು ಸಲ್ಲಿಸಿರುವ ಒಎಂಆರ್ ಶೀಟ್ ಅಸಲಿ ಎಂದು ವಾದಿಸಿದ್ದರು. 

‘ಎನ್‌ಟಿಎ ಅಧಿಕಾರಿಗಳು ಸಲ್ಲಿಸಿದ್ದ ದಾಖಲೆಯು ಅಧಿಕೃತವಾಗಿದ್ದು, ಅದರ ಅಸಲಿತನವನ್ನು ಅನುಮಾನಿಸಲು ಯಾವುದೇ ಕಾರಣವಿಲ್ಲ. ಅಭ್ಯರ್ಥಿಯು ಪಡೆದ ಅಂಕಗಳನ್ನು ಎನ್‌ಟಿಎ ಬದಲಿಸುತ್ತದೆ ಎನ್ನುವುದಕ್ಕೆ ಯಾವುದೇ ಸಮಪರ್ಕ ಕಾರಣವಿಲ್ಲ’ ಎಂದು ಹೇಳಿದ ನ್ಯಾಯಾಲಯವು, ಯುವತಿ ಒಎಂಆರ್ ಶೀಟ್ ತಿರುಚಿದ್ದಕ್ಕೆ ಆಘಾತ ವ್ಯಕ್ತಪಡಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.