ನವದೆಹಲಿ: ಕೋಚಿಂಗ್ ಸೆಂಟರ್‌ನ ನಲೆಮಹಡಿಗೆ ನೀರು ನುಗ್ಗಿ ಮೂವರು ಐಎಎಸ್ ಆಕಾಂಕ್ಷಿಗಳು ಮೃತಪಟ್ಟಿರುವ ಪ್ರಕರಣವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ಸಿಬಿಐಗೆ ವರ್ಗಾಯಿಸಿದೆ.
ಪ್ರಕರಣದ ಕುರಿತು ಸಿಬಿಐ ತನಿಖೆಯ ಮೇಲ್ವಿಚಾರಣೆಯನ್ನು ಮಾಡಲು ಹಿರಿಯ ಅಧಿಕಾರಿಯೊಬ್ಬರನ್ನು ನೇಮಿಸುವಂತೆ ಹಂಗಾಮಿ ಮುಖ್ಯನಾಯಮೂರ್ತಿ ಮನಮೋಹನ್ ಅವರ ನೇತೃತ್ವದ ಪೀಠವು ಕೇಂದ್ರ ಜಾಗೃತ ಆಯೋಗಕ್ಕೆ ಸೂಚಿಸಿದೆ.
‘ತನಿಖೆಯ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಆನುಮಾನ ಇರಬಾರದು ಎಂಬ ಉದ್ದೇಶದಿಂದ ಸಿಬಿಐಗೆ ವರ್ಗಾಯಿಸಲಾಗಿದೆ’ ಎಂದು ನ್ಯಾಯಾಲಯ ತಿಳಿಸಿದೆ.
ದೆಹಲಿ ಪೊಲೀಸರು ಮತ್ತು ಮಹಾನಗರ ಪಾಲಿಕೆಗೆ ಚಾಟಿ ಬೀಸಿದ ನ್ಯಾಯಾಲಯ, ‘ದೆಹಲಿ ಮಹಾನಗರ ಪಾಲಿಕೆಯು ನಿರ್ಲಕ್ಷ್ಯ ಧೋರಣೆ ಹೊಂದಿರುವ ಅಧಿಕಾರಿಗಳಿಂದಲೇ ತುಂಬಿದೆ. ಸಾರ್ವಜನಿಕರ ಕಣ್ಣಿನಲ್ಲಿ ಅಧಿಕಾರಿಗಳು ಅಸಮರ್ಥರಾಗಿದ್ದಾರೆ’ ಎಂದು ಹೇಳಿದೆ.
ರಾಜಿಂದರ್ ನಗರ ಮಳೆ ನೀರು ಹೋಗುವ ಜಾಗ ಮತ್ತು ಒಳಚರಂಡಿ ಮೇಲಿನ ಒತ್ತುವರಿ ಮತ್ತು ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವಂತೆ ನ್ಯಾಯಾಲಯ ಆದೇಶಿಸಿದೆ.
ದೆಹಲಿಯ ರಾಜಿಂದರ್ ನಗರದ ‘ರಾವ್ಸ್ ಸ್ಟಡಿ ಸರ್ಕಲ್’ ಕೋಚಿಂಗ್ ಸೆಂಟರ್‌ನ ನೆಲಮಹಡಿಗೆ ನೀರು ನುಗ್ಗಿದ ಪರಿಣಾಮ ಮೂವರು ಐಎಎಸ್ ಆಕಾಂಕ್ಷಿಗಳು ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.