ಮುಂಬೈ: ‘ಶಸ್ತ್ರಚಿಕಿತ್ಸೆಯ ಮೂಲಕ ಲಿಂಗಪರಿವರ್ತನೆಗೊಂಡ ಮಹಿಳೆಯು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪರಿಹಾರ ಪಡೆಯಲು ಅರ್ಹಳು’ ಎಂದು ಹೇಳಿರುವ ಬಾಂಬೆ ಹೈಕೋರ್ಟ್, ಪತ್ನಿಯಿಂದ ದೂರವಾಗಿರುವ ಪತಿಯು ಜೀವನಾಂಶ ನೀಡಬೇಕು ಎಂಬ ಕೆಳಹಂತದ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.
ನ್ಯಾಯಮೂರ್ತಿ ಅಮಿತ್ ಬೋರ್ಕರ್ ಅವರ ನೇತೃತ್ವದ ಏಕಸದಸ್ಯ ಪೀಠವು ಮಾರ್ಚ್ 16ರಂದು ಈ ಆದೇಶ ನೀಡಿದ್ದು, ಆದೇಶದ ಪ್ರತಿ ಶುಕ್ರವಾರ ಲಭ್ಯವಾಗಿದೆ.
ಈ ಕಾಯ್ದೆಯಡಿಯಲ್ಲಿ ‘ಮಹಿಳೆ’ ಎನ್ನುವ ಪದವು ಮಹಿಳೆ ಮತ್ತು ಪುರುಷ ಎನ್ನುವ ನಿರ್ದಿಷ್ಟ ರೀತಿಗೆ ಸೀಮಿತವಾಗಿಲ್ಲ. ತಮ್ಮ ಲಿಂಗವನ್ನು ಬದಲಾಯಿಸಿಕೊಳ್ಳುವ ಲಿಂಗತ್ವ ಅಲ್ಪಸಂಖ್ಯಾತರಿಗೂ ಇದು ಅನ್ವಯಿಸುತ್ತದೆ. ಆದ್ದರಿಂದ, ನನ್ನ ಅಭಿಪ್ರಾಯದಲ್ಲಿ, ತಮ್ಮ ಲಿಂಗವನ್ನು ಹೆಣ್ಣಾಗಿ ಬದಲಾಯಿಸಿಕೊಳ್ಳಲು ಶಸ್ತ್ರಚಿಕಿತ್ಸೆಗೆ ಒಳಗಾದ ಲಿಂಗಪರಿವರ್ತಿತ ವ್ಯಕ್ತಿಯನ್ನು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ಡೆಯ ಅರ್ಥದಲ್ಲಿ ನೊಂದ ವ್ಯಕ್ತಿ ಎಂದು ಕರೆಯಬೇಕಾಗಿದೆ’ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
ಕೌಟುಂಬಿಕ ಸಂಬಂಧವನ್ನು ವ್ಯಾಖ್ಯಾನಿಸುವ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಸೆಕ್ಷನ್ 2 (ಎಫ್) ಲಿಂಗತ್ವ ತಟಸ್ಥವಾಗಿದೆ. ಅದು ಲೈಂಗಿಕ ಆದ್ಯತೆಗಳನ್ನು ಒಳಗೊಳ್ಳದೇ ವ್ಯಕ್ತಿಗಳನ್ನು ಒಳಗೊಂಡಿದೆ ಎಂಬುದನ್ನು ನ್ಯಾಯಮೂರ್ತಿ ಅಮಿತ್ ಬೋರ್ಕರ್ ಅವರು ಗಮನಿಸಿದ್ದಾರೆ.
ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿಯು ಪುರುಷ ಅಥವಾ ಮಹಿಳೆ ಹೀಗೆ ತಮ್ಮ ಆಯ್ಕೆಯ ಲಿಂಗಕ್ಕೆ ಅರ್ಹರಾಗಿರುತ್ತಾರೆ ಎಂಬುದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.
ಆರಂಭದಲ್ಲಿ ಪುರುಷನಾಗಿದ್ದ, ಶಸ್ತ್ರಚಿಕಿತ್ಸೆಯ ಬಳಿಕ ಮಹಿಳೆಯಾದ ಪತ್ನಿಗೆ ₹ 12 ಸಾವಿರ ಮಾಸಿಕ ಜೀವನಾಂಶವನ್ನು ಪಾವತಿಸುವಂತೆ ನಿರ್ದೇಶನ ನೀಡಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನಿರ್ದೇಶನವನ್ನು ಎತ್ತಿಹಿಡಿಯುವ ಸೆಷನ್ಸ್ ನ್ಯಾಯಾಲಯದ ಆದೇಶವನ್ನು (2021ರ ಅಕ್ಟೋಬರ್) ಅರ್ಜಿದಾರರು ಪ್ರಶ್ನಿಸಿದ್ದರು.
ಪತ್ನಿಯು ತನ್ನ ಪತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಿದ್ದರು.
2016ರಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಹೆಣ್ಣಾಗಿ ಪರಿವರ್ತನೆಯಾಗಿದ್ದ ಈಕೆ, ಅದೇ ವರ್ಷ ಮದುವೆಯಾಗಿದ್ದಳು. ಎರಡು ವರ್ಷಗಳ ನಂತರ ಗಂಡ–ಹೆಂಡತಿ ನಡುವೆ ಭಿನ್ನಾಭಿಪ್ರಾಯಗಳು ಉಂಟಾದ ನಂತರ ಅವರು ದೂರವಾಗಿದ್ದರು. ಪತ್ನಿಯು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಜೀವನಾಂಶವನ್ನು ಕೋರಿ ಅರ್ಜಿ ಸಲ್ಲಿಸಿದ್ದರು.
ಪತಿಯು ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯಲ್ಲಿ ತನ್ನ ಹೆಂಡತಿಯು ನೊಂದ ವ್ಯಕ್ತಿಯ ವ್ಯಾಖ್ಯಾನನದೊಳಗೆ ಬರುವುದಿಲ್ಲ ಎಂದಿದ್ದರು. ಆ ರೀತಿಯ ಹಕ್ಕನ್ನು ಕೌಟುಂಬಿಕ ಸಂಬಂಧದಲ್ಲಿ ‘ಮಹಿಳೆಯರಿಗೆ’ ಮಾತ್ರ ನೀಡಲಾಗಿದೆ ಎಂದಿದ್ದರು. ಪತ್ನಿ ಪರ ವಕೀಲರಾದ ವೈಶಾಲಿ ಲಕ್ಷ್ಮಣ್ ಮೈಂದಾದ್ ಅವರು ವಾದ ಮಂಡಿಸಿ ಶಸ್ತ್ರಚಿಕಿತ್ಸೆಯ ಬಳಿಕ ಪತ್ನಿಯು ಮಹಿಳೆಯಾಗಿ ಗುರುತಿಸಿಕೊಂಡಿದ್ದಾಳೆ ಎಂದು ಹೇಳಿದ್ದಾರೆ.
ಪತಿಯ ಮನವಿಯನ್ನು ವಜಾಗೊಳಿಸಿದ ಹೈಕೋರ್ಟ್, ನಾಲ್ಕು ವಾರಗಳಲ್ಲಿ ಪತ್ನಿಗೆ ಎಲ್ಲಾ ಬಾಕಿ ಜೀವನಾಂಶವನ್ನು ಪಾವತಿಸುವಂತೆ ಪತಿಗೆ ಸೂಚಿಸಿತು.
ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.