ನವದೆಹಲಿ: ವಂಚಕ ಸುಕೇಶ್ ಚಂದ್ರಶೇಖರ್‌ನಿಂದ ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿರುವ 26 ಐಷಾರಾಮಿ ಕಾರುಗಳ ಹರಾಜಿಗೆ ದೆಹಲಿ ನ್ಯಾಯಾಲಯ ಹಸಿರು ನಿಶಾನೆ ತೋರಿಸಿದೆ.
ಇ.ಡಿ ಕ್ರಮವನ್ನು ಪ್ರಶ್ನಿಸಿ ಸುಕೇಶ್ ಪತ್ನಿ ಲೀನಾ ಅವರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ವಜಾಗೊಳಿಸಿ ಆದೇಶಿಸಿದೆ.
ಸುಕೇಶ್‌ನಿಂದ ವಶಪಡಿಸಿಕೊಂಡಿರುವ ಕಾರುಗಳನ್ನು ಹರಾಜಿನಲ್ಲಿ ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ನಿಶ್ಚಿತ ಠೇವಣಿ ಇಡಬೇಕು ಎಂದು ಕಳೆದ ವರ್ಷ ವಿಚಾರಣಾ ನ್ಯಾಯಾಲಯ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಲೀನಾ ಮೇಲ್ಮನವಿ ಸಲ್ಲಿಸಿದ್ದರು.
ಲೀನಾ ಅರ್ಜಿ ವಿಚಾರಣೆ ನಡೆಸಿ ಆದೇಶ ಪ್ರಕಟಿಸಿದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸ್ವರ್ಣಕಾಂತ್ ಶರ್ಮಾ ಅವರು, ಎಲ್ಲ 26 ಐಷಾರಾಮಿ ಕಾರುಗಳ ಮಾರಾಟದಿಂದ ಬರುವ ಹಣವನ್ನು ಬಡ್ಡಿ ಬರುವ ನಿಶ್ಚಿತ ಠೇವಣಿಗೆ ಇಡಬೇಕು. ಲೀನಾ ಅವರ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ. ಇ.ಡಿ ಕ್ರಮ ಸರಿಯಾಗಿದೆ ಎಂದು ಹೇಳಿದ್ದಾರೆ.
ತುಂಬಾ ವರ್ಷಗಳಿಂದ ಆ ಕಾರುಗಳನ್ನು ಹಾಗೇ ಶೆಡ್‌ನಲ್ಲಿ ಇಡುವುದರಿಂದ ಅವುಗಳ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಹೀಗಾಗಿ ಅವುಗಳನ್ನು ಮಾರಾಟ ಮಾಡಿ ಹಣ ಠೇವಣಿ ಇಡುವುದೇ ಸೂಕ್ತ ಎಂದು ಆದೇಶಿಸಿದ್ದಾರೆ.
ದೆಹಲಿ ಪೊಲೀಸ್‌ನ ಆರ್ಥಿಕ ಅಪರಾಧಗಳ ವಿಭಾಗದ ನೇತೃತ್ವದಲ್ಲಿ ಹರಾಜು ನಡೆಯಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಪ್ರಕರಣವೇನು?
ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ ಎಂಬಾತ ಉದ್ಯಮಿ ಶಿವಿಂದರ್ ಮೋಹನ್ ಸಿಂಗ್ ಎಂಬುವರ ಪತ್ನಿ ಅದಿತಿ ಸಿಂಗ್‌ಗೆ ಕರೆ ಮಾಡಿ ತಾನು ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ಪಕ್ಷಕ್ಕೆ ದೇಣಿಗೆ ನೀಡುವಂತೆ ಹೇಳಿ ಅವರಿಂದ ₹200 ಕೋಟಿಗೂ ಅಧಿಕ ಹಣ ಪಡೆದು ವಂಚಿಸಿದ್ದ. ಈ ಪೈಕಿ ₹10 ಕೋಟಿ ಮೌಲ್ಯದ ಉಡುಗೊರೆಗಳನ್ನು ನಟಿ ಜಾಕ್ವೆಲಿನ್‌ಗೆ ನೀಡಿದ್ದ. ಕೆಲವಷ್ಟು ಹಣದಿಂದ ಐಷಾರಾಮಿ ಕಾರುಗಳನ್ನು ಖರೀದಿಸಿದ್ದ ಎಂದು ಆರೋಪಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.