ನವದೆಹಲಿ: ಕೇಂದ್ರ ಬಜೆಟ್‌ನಲ್ಲಿ ಕೃಷಿಗೆ ಒಟ್ಟಾರೆ ಮೀಸಲಿಟ್ಟ ಪಾಲಿನಲ್ಲಿ ಇಳಿಕೆಯಾಗಿರುವ ಕುರಿತು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ದೇವೇಗೌಡ ಅವರು ಕಳವಳ ವ್ಯಕ್ತಪಡಿಸಿದ್ದು, ಈ ಕ್ಷೇತ್ರದಲ್ಲಿ ವೆಚ್ಚ ಹೆಚ್ಚಳವನ್ನು ನಿರೀಕ್ಷಿಸಿದ್ದ ಬಹುತೇಕರಿಗೆ ಬಜೆಟ್ ನಿರಾಸೆ ತಂದಿದೆ ಎಂದು ಸೋಮವಾರ ಹೇಳಿದ್ದಾರೆ.
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸಿದ ಅವರು, 2022ರ ವೇಳೆಗೆ ಕೃಷಿ ಆದಾಯವನ್ನು ದ್ವಿಗುಣಗೊಳಿಸುವ ಕೇಂದ್ರ ಸರ್ಕಾರದ ಭರವಸೆಯನ್ನು ಈ ಬಾರಿಯ ಬಜೆಟ್‌ನಲ್ಲಿ ಉಲ್ಲೇಖಿಸಿಲ್ಲ ಎಂದೂ ಹೇಳಿದ್ದಾರೆ.
2022-23ರ ಹಣಕಾಸು ವರ್ಷದ ಒಟ್ಟು ಬಜೆಟ್‌ನಲ್ಲಿ ಕೃಷಿ ಕ್ಷೇತ್ರದ ಹಂಚಿಕೆಯು ಶೇ 3.8ರಷ್ಟು ಕಡಿಮೆಯಾಗಿದೆ ಎಂದು ಹೇಳಿದ ಅವರು, ಬಿತ್ತನೆಬೀಜ, ಗೊಬ್ಬರ, ಯಂತ್ರೋಪಕರಣಗಳಿಗೆ ಸಂಬಂಧಿಸಿದಂತೆ ಜಿಎಸ್‌ಟಿಯನ್ನು ತೆಗೆದುಹಾಕುವ ಮನವಿಯನ್ನೂ ಕೈಬಿಡಲಾಗಿದೆ ಎಂದು ಆರೋಪಿಸಿದರು.
‘ಆಹಾರ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸಬ್ಸಿಡಿಯನ್ನು ಕಡಿಮೆ ಮಾಡಲಾಗಿದ್ದು, ಇದು ಕೃಷಿ ವೆಚ್ಚ ಮತ್ತು ವೆಚ್ಚದ ಒಳಹರಿವಿನ ಮೇಲೆ ಪರಿಣಾಮ ಬೀರುತ್ತದೆ. ಕೃಷಿ ಮತ್ತು ಸಂಬಂಧಿತ ವಲಯಗಳಿಗೆ ಬಜೆಟ್ ಹಂಚಿಕೆಯಲ್ಲಿ ಹೆಚ್ಚಿನ ವೆಚ್ಚವನ್ನು ನಿರೀಕ್ಷಿಸುತ್ತಿದ್ದ ಬಹುತೇಕರನ್ನು ಈ ಬಾರಿಯ ಬಜೆಟ್ ನಿರಾಸೆಗೊಳಿಸಿದೆ’ ಎಂದು ಅವರು ಹೇಳಿದರು.
ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ನಿಗದಿಪಡಿಸಲಾಗಿರುವ ಬಜೆಟ್, ಹೆಚ್ಚಿನ ಸಂಖ್ಯೆಯ ಬೆಳೆಗಳನ್ನು ಒಳಗೊಳ್ಳುವ ಬದಲು ಬೆಳೆಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ. ಇದು ರೈತರ ಆಹಾರ ಉತ್ಪಾದನೆ, ಆದಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅವರು ತಿಳಿಸಿದರು.
ರಾಸಾಯನಿಕ ಸಿಂಪಡಣೆಗಾಗಿ ಕೃಷಿಯಲ್ಲಿ ಡ್ರೋನ್‌ಗಳ ಬಳಕೆ ಕುರಿತ ಬಜೆಟ್‌ನ ಅಂಶವನ್ನು ಉಲ್ಲೇಖಿಸಿದ ಅವರು, ಸರ್ಕಾರದ ಈ ಯೋಜನೆ ಸಂಪೂರ್ಣ ಅನುಚಿತವಾಗಿದೆ. ಶೇ 82ರಷ್ಟು ರೈತರು ಸಣ್ಣ ಪ್ರಮಾಣದ ರೈತರು. ಇವರು ಸರಾಸರಿ 1.08 ಹೆಕ್ಟರ್ ಭೂಮಿಯನ್ನು ಹೊಂದಿದ್ದಾರೆ. ಡ್ರೋನ್‌ಗಳನ್ನು ಬಳಸಿ ರಾಸಾಯನಿಕ ಸಿಂಪಡಣೆ ಮಾಡುವುದು ಸಾವಯವ ಕೃಷಿಗೆ ವಿರುದ್ಧವಾಗಿದೆ ಎಂದೂ ಹೇಳಿದರು.
2022-23ಅನ್ನು 'ಅಂತರರಾಷ್ಟ್ರೀಯ ರಾಗಿ ವರ್ಷ’ ಎಂದು ಘೋಷಿಸುವ ಸರ್ಕಾರದ ಕ್ರಮವನ್ನು ಸ್ವಾಗತಿಸಿದ ದೇವೇಗೌಡರು ಇದು ಬಜೆಟ್‌ನ ಪ್ರಧಾನ ಆಕರ್ಷಣೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚರ್ಚೆಯಲ್ಲಿ ಭಾಗವಹಿಸಿದ ಎಎಪಿಯ ಸಂಜಯ್ ಸಿಂಗ್, ಸರ್ಕಾರವು ರಾಷ್ಟ್ರಪತಿಗಳ ಭಾಷಣದಲ್ಲಿ ಹಲವು ಅವಾಸ್ತವಿಕ ಅಂಶಗಳನ್ನು ಇರಿಸಿದೆ ಎಂದು ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.