ADVERTISEMENT

ಕಾಲು ಕೆರೆದು ಜಗಳಕ್ಕೆ ಬರಬೇಡಿ: ತಮಿಳುನಾಡು ಸಿಎಂಗೆ ಎಚ್‌ಡಿಕೆ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 12:27 IST
Last Updated 22 ಜುಲೈ 2024, 12:27 IST
<div class="paragraphs"><p>ಎಂ.ಕೆ. ಸ್ಟಾಲಿನ್, ಎಚ್.ಡಿ. ಕುಮಾರಸ್ವಾಮಿ</p></div>

ಎಂ.ಕೆ. ಸ್ಟಾಲಿನ್, ಎಚ್.ಡಿ. ಕುಮಾರಸ್ವಾಮಿ

   

ನವದೆಹಲಿ: ‘ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿಕೆಗಳಲ್ಲಿ ತಾಳಮೇಳವಿಲ್ಲ, ಸ್ಥಿರತೆ ಇಲ್ಲ. ಅವರೊಬ್ಬ ಗೊಂದಲಮಯ ವ್ಯಕ್ತಿತ್ವದ ವ್ಯಕ್ತಿ‘ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.

ಸೋಮವಾರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ನಾನು ರಾಜ್ಯಕ್ಕೆ ಭೇಟಿ ನೀಡುವುದನ್ನು ಶಿವಕುಮಾರ್‌ ಸಹಿಸುತ್ತಿಲ್ಲ. ನಾನು ಉತ್ತರ ಕನ್ನಡ ಜಿಲ್ಲೆಯ ಶಿರೂರು ಗುಡ್ಡಕ್ಕೆ ಭೇಟಿ ನೀಡಿದಾಗ, ‘ಈ ಮನುಷ್ಯ ಏತಕ್ಕೆ ಬಂದಿದ್ದಾರೆ. ಮಿಲಿಟರಿಯನ್ನು ಕರೆದುಕೊಂಡು ಬರಬೇಕಿತ್ತು. ಒಬ್ಬರೇ ಬಂದು ಏನು ಮಾಡುತ್ತಾರೆ?’ ಎಂದೆಲ್ಲಾ ಲಘುವಾಗಿ ಹೇಳಿಕೆ ನೀಡಿದ್ದರು. ಕೇಂದ್ರ ಸರ್ಕಾರದ ನಿರ್ದೇಶನ ಹಾಗೂ ರಾಜ್ಯ ಸರ್ಕಾರದ ಅಪೇಕ್ಷೆಯಂತೆ ನಲವತ್ತಕ್ಕೂ ಹೆಚ್ಚು ಯೋಧರು ಬೆಳಗಾವಿಯಿಂದ ತೆರಳಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಮತ್ತೆ ಸೋಮವಾರದಂದು ಶಿವಕುಮಾರ್‌ ಹೇಳಿಕೆ ನೀಡಿ, ʼನಾನು ಕುಮಾರಸ್ವಾಮಿ ಬಗ್ಗೆ ಮಾತನಾಡಲ್ಲ. ನನ್ನ ಹೆಸರೇಳದಿದ್ದರೆ ಅವರಿಗೆ ತಿಂದ ಅನ್ನ ಜೀರ್ಣ ಆಗಲ್ಲʼ ಎಂದಿದ್ದಾರೆ. ಅವರ ಬಗ್ಗೆ ಮಾತನಾಡಿದ್ದು ಯಾರು? ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಅವರ ಹೇಳಿಕೆಗಳನ್ನು ಗಮನಿಸಿದರೆ ಅವರೊಬ್ಬ ಗೊಂದಲದ ವ್ಯಕ್ತಿ ಎನ್ನುವುದು ತಿಳಿಯುತ್ತದೆ’ ಎಂದರು. 

ADVERTISEMENT

ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಜಲಾಶಯಗಳು ಭರ್ತಿಯಾಗಿವೆ. ಹೀಗಾಗಿ ಸರ್ಕಾರಕ್ಕೆ ದೊಡ್ಡ ಮಟ್ಟದ ಮುಜುಗರ ತಪ್ಪಿದಂತಾಗಿದೆ. ಈಗ ಅವರು ತಾಯಿ ಚಾಮುಂಡೇಶ್ವರಿಯನ್ನು ನೆನಪು ಮಾಡಿಕೊಂಡಿದ್ದಾರೆ. ಸರ್ವಪಕ್ಷ ಸಭೆಗೆ ನಾನು ಹೋಗಲಿಲ್ಲ ಎಂದು ಟೀಕೆ ಮಾಡಿದ್ದರು. ನಮ್ಮನ್ನು ಸರ್ವಪಕ್ಷ ಸಭೆಗೆ ಕರೆಯುವುದಕ್ಕೆ ಮೊದಲೇ ನೆರೆ ರಾಜ್ಯಕ್ಕೆ ನೀರು ಹರಿಸಿ ಆಗಿತ್ತು. ನೀರು ಬಿಟ್ಟಾದ ಮೇಲೆ ಅವರು ನಮ್ಮನ್ನು ಕರೆಸಿ ಮಾತನಾಡುವುದು ಏನಿದೆ? ಇದನ್ನು ಪ್ರಶ್ನೆ ಮಾಡಿದರೆ ರಾಜಕೀಯ ಎನ್ನುತ್ತಾರೆ. ಇವರು ಇನ್ನೂ ನಾಲ್ಕು ದಿನ ಸರ್ವಪಕ್ಷ ಸಭೆ ಕರೆಯುವ ಅಗತ್ಯವೇ ಇರಲಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

ತಮಿಳುನಾಡು ಸಿಎಂಗೆ ಕಿವಿಮಾತು

ನಾನು ತಮಿಳುನಾಡು ಮುಖ್ಯಮಂತ್ರಿ ಅವರಿಗೆ ಹಾಗೂ ಅಲ್ಲಿನ ರಾಜಕಾರಣಿಗಳಿಗೆ ಹೇಳುವುದಿಷ್ಟೇ. ಈ ಮಾತನ್ನು ನಾನು ಕೇಂದ್ರ ಸಚಿವನಾಗಿ ಹೇಳುತ್ತಿಲ್ಲ. ಕರ್ನಾಟಕದಲ್ಲಿ ಉತ್ತಮ ಮಳೆಯಾಗುತ್ತಿದೆ. ಕಳೆದ ಐದಾರು ದಿನಗಳಿಂದ ಕೆಆರ್‌ಎಸ್‌ ಮತ್ತು ಕಬಿನಿ ಜಲಾಶಯಗಳಿಂದ ಪ್ರತೀದಿನ ಎಂಟರಿಂದ ಹತ್ತು ಟಿಎಂಸಿ ನೀರು ನೆರೆರಾಜ್ಯಕ್ಕೆ ಹರಿದುಹೋಗಿದೆ. ಜೂನ್‌ ಮತ್ತು ಜುಲೈ ತಿಂಗಳಿನಲ್ಲಿ ಎಷ್ಟೆಲ್ಲಾ ನೀರು ಹರಿಸಬೇಕಾಗಿತ್ತೋ ಅಷ್ಟೂ ನೀರನ್ನು ಈ ತಿಂಗಳಲ್ಲಿ ಸಂಪೂರ್ಣವಾಗಿ ಹರಿಸಲಾಗಿದೆ. ಕಾವೇರಿ ಜಲ ನಿರ್ವಹಣಾ ಸಮಿತಿ ಮತ್ತು ಪ್ರಾಧಿಕಾರ ಹೇಳಿದ್ದಕ್ಕಿಂತ ಹೆಚ್ಚಿನ ಪ್ರಮಾಣದ ನೀರು ತಮಿಳುನಾಡಿಗೆ ಹೋಗಿದೆ. ಸುಖಾಸುಮ್ಮನೆ ಕಾಲು ಕೆರೆದು ಜಗಳಕ್ಕೆ ಬರುವುದಲ್ಲ, ಕರ್ನಾಟಕದ ಬಗ್ಗೆ ನಿಮ್ಮ ನಡವಳಿಕೆಗಳನ್ನು ನೀವು ತಿದ್ದಿಕೊಳ್ಳಿ. ನೀರು ನಿರಂತರವಾಗಿ ಬಂದಾಗ ನಿಮಗಾಗಲಿ ಅಥವಾ ನಿಮ್ಮ ರೈತರಿಗಾಗಲಿ ಕೊರತೆ ಮಾಡಿಲ್ಲ. ಹಲವಾರು ವರ್ಷ ನಿಮಗೆ ಕೊಡಬೇಕಾದ ನೀರಿಗಿಂತ ಮೂರು ಪಟ್ಟು ಹೆಚ್ಚು ನೀರನ್ನು ಕೊಟ್ಟಿದ್ದೇವೆ. ನಾವು ಬಿಟ್ಟ ನೀರೆಲ್ಲವೂ ಸಮುದ್ರಕ್ಕೆ ಹೋಗ್ತಾ ಇರುವುದನ್ನು ನಾವು ಕಾಣುತ್ತಿದ್ದೇವೆ’ ಎಂದು ಅವರು ಹೇಳಿದರು. 

ವ್ಯರ್ಥವಾಗಿ ಸಮುದ್ರಕ್ಕೆ ಸೇರುವ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ, ಎರಡೂ ರಾಜ್ಯಗಳ ರೈತರಿಗೆ ಹಾಗೂ ಕುಡಿಯುವ ನೀರಿಗೆ ಅನುಕೂಲವಾಗುವಂತೆ ಮೇಕೆದಾಟು ಯೋಜನೆ ನಿರ್ಮಾಣ ಆಗಬೇಕಿದೆ. ಅನೇಕ ವರ್ಷಗಳಿಂದ ಈ ಬಗ್ಗೆ ತಮಿಳುನಾಡು ಆಕ್ಷೇಪ ತೆಗೆಯುತ್ತಿದೆ. ಇದರ ಬಗ್ಗೆ ತಮಿಳುನಾಡು ಸರ್ಕಾರ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಅವರು ಕಿವಿಮಾತು ಹೇಳಿದರು.

ನೀರಿನ ವಿಷಯದಲ್ಲಿಯೂ ರಾಜ್ಯ ಕಾಂಗ್ರೆಸ್‌ ಸರಕಾರ ಚಿಲ್ಲರೆ ರಾಜಕಾರಣ ಮಾಡುತ್ತಿದೆ. ನಾವೆಂದೂ ಚಿಲ್ಲರೆ ರಾಜಕಾರಣ ಮಾಡಿಲ್ಲ. ಅತ್ಯಂತ ಕೆಟ್ಟ ರೀತಿಯಲ್ಲಿ ಕೇಂದ್ರದ ಸಚಿವರನ್ನು ನಡೆಸಿಕೊಳ್ಳುವುದು, ಲಘುವಾಗಿ ಮಾತನಾಡುವುದು ಶೋಭೆಯಲ್ಲ. ಇಂಥ ನಡವಳಿಕೆಯನ್ನು ಪ್ರತಿದಿನವೂ ನಾನು ಕಾಣುತ್ತಿದ್ದೇನೆ. ಮೊದಲು ಇಂಥ ರಾಜಕಾರಣವನ್ನು ನಿಲ್ಲಿಸಿ. ರಾಜ್ಯದ ಅಭಿವೃದ್ಧಿಗೆ ಪೂರಕವಾದ ನಡವಳಿಕೆ ಅಳವಡಿಸಿಕೊಳ್ಳಿ ಎಂದು ಕುಮಾರಸ್ವಾಮಿ ಅವರು ಡಿಕೆಶಿಗೆ ತಿರುಗೇಟು ಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.