ನವದೆಹಲಿ: ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್‌ಗೆ ಪದ್ಮ ಭೂಷಣ ಪ್ರಶಸ್ತಿ ಒಲಿದಿದೆ. ಇದು ಕಾಂಗ್ರೆಸ್ ನಾಯಕರ ವಲಯದಲ್ಲೇ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ.
ಕಾಂಗ್ರೆಸ್ ಮುಖಂಡ ಶಶಿ ತರೂರ್ ಶುಭಾಶಯಗಳನ್ನು ತಿಳಿಸಿದರೆ ಮತ್ತೊಬ್ಬ ನಾಯಕ ಜೈರಾಮ್ ರಮೇಶ್, ಗುಲಾಂ ನಬಿ ಆಜಾದ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಪದ್ಮ ಪ್ರಶಸ್ತಿ ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನು ರಿಟ್ವೀಟ್ ಮಾಡಿರುವ ಜೈರಾಮ್ ರಮೇಶ್, 'ಸರಿಯಾದುದ್ದನ್ನೇ ಮಾಡಿದ್ದಾರೆ. ಅವರು (ಬುದ್ದದೇವ್) ಗುಲಾಂ (ಗುಲಾಮ) ಅಲ್ಲ, ಆಜಾದ್ (ಸ್ವಾತಂತ್ರ್ಯ) ಆಗಲು ಬಯಸುತ್ತಾರೆ' ಎಂದು ಹೇಳಿದ್ದಾರೆ.
ಈ ಮೂಲಕ ಗುಲಾಂ ನಬಿ ಆಜಾದ್ ವಿರುದ್ಧ ತೀಕ್ಷ್ಣ ಪ್ರತಿಕ್ರಿಯೆನಡೆಸಿದ್ದಾರೆ.
73ನೇ ಗಣರಾಜ್ಯೋತ್ಸವದ ಮುನ್ನಾ ದಿನ ಪದ್ಮ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದೆ.
ಗುಲಾಂ ನಬಿ ಆಜಾದ್ ಹಾಗೂ ಬುದ್ಧದೇವ್ ಭಟ್ಟಾಚಾರ್ಯ, ದೇಶದ ಮೂರನೇ ಅತ್ಯುನ್ನತ್ತ ನಾಗರಿಕ ಪ್ರಶಸ್ತಿ ಪದ್ಮ ಭೂಷಣಕ್ಕೆ ಆಯ್ಕೆಯಾಗಿದ್ದರು.
'ನನಗೆ ಪದ್ಮಭೂಷಣದ ಬಗ್ಗೆ ಏನೂ ತಿಳಿದಿಲ್ಲ. ಯಾರೂ ನನಗೆ ಅದರ ಬಗ್ಗೆ ಏನನ್ನೂ ಹೇಳಿಲ್ಲ. ಅವರು ನಿಜವಾಗಿಯೂ ಪದ್ಮ ಭೂಷಣ ನೀಡಿದ್ದರೆ ನಾನು ಅದನ್ನು ತಿರಸ್ಕರಿಸುತ್ತೇನೆ' ಎಂದು ಭಟ್ಟಾಚಾರ್ಯ ಹೇಳಿಕೆಯನ್ನು 'ಎನ್‌ಡಿಟಿವಿ' ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.