ಬದಾಯು (ಉತ್ತರಪ್ರದೇಶ): ಜ್ವರದಿಂದ ಬಳಲುತ್ತಿದ್ದ ಐದು ವರ್ಷದ ಬಾಲಕಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗದೆ, ಆಕೆ ಮೃತಪಟ್ಟ ಪ್ರಕರಣದ ಸಂಬಂಧ ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿನ ಇಬ್ಬರು ಗುತ್ತಿಗೆ ವೈದ್ಯರನ್ನು ಆರೋಗ್ಯ ಇಲಾಖೆಯು ಸೇವೆಯಿಂದ ವಜಾಗೊಳಿಸಿ, ಇನ್ನಿಬ್ಬರು ಕಾಯಂ ವೈದ್ಯರನ್ನು ಅಮಾನತುಗೊಳಿಸಿದೆ.
ಆಸ್ಪತ್ರೆಯ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಕ್ರಿಕೆಟ್ ಆಟದಲ್ಲಿ ತೊಡಗಿದ್ದರಿಂದ ಚಿಕಿತ್ಸೆ ಸಿಗದೆ ಮಗು ಮೃತಪಟ್ಟಿತು ಎಂದು ಬಾಲಕಿಯ ಕುಟುಂಬದವರು ಆರೋಪಿಸಿದ್ದರು. ಈ ಘಟನೆ ಬಗ್ಗೆ ತನಿಖೆ ನಡೆಸಲು ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿ ಬುಧವಾರ ಮೂವರು ಸದಸ್ಯರ ಸಮಿತಿ ರಚಿಸಿತ್ತು. ಸಮಿತಿಯು ಗುರುವಾರ ಸಂಜೆ ತನಿಖಾ ವರದಿ ಸಲ್ಲಿಸಿದೆ ಎಂದು ಸರ್ಕಾರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಅರುಣ್ ಕುಮಾರ್ ತಿಳಿಸಿದ್ದಾರೆ.
‘ಘಟನೆಯ ವೇಳೆ ಕೆಲ ವೈದ್ಯರು ತಮ್ಮ ಕರ್ತವ್ಯ ಬಿಟ್ಟು ಕ್ರಿಕೆಟ್ ಆಡುತ್ತಿದ್ದರೆಂದು ತನಿಖಾ ವರದಿ ದೃಢಪಡಿಸಿದೆ. ಈ ನಿರ್ಲಕ್ಷ್ಯದ ಬಗ್ಗೆ ಕಾಲೇಜು ಆಡಳಿತ ಮಂಡಳಿ ಕಠಿಣ ಕ್ರಮ ಕೈಗೊಂಡಿದೆ’ ಎಂದು ಅವರು ತಿಳಿಸಿದ್ದಾರೆ.
ಗುತ್ತಿಗೆ ಆಧಾರದಲ್ಲಿ ನೇಮಕವಾಗಿದ್ದ, ಇಎನ್‌ಟಿ ವಿಭಾಗ ಮುಖ್ಯಸ್ಥ ಡಾ. ಶಲಭ್ ವೈಶ್ ಮತ್ತು ಇದೇ ವಿಭಾಗದ ಜೂನಿಯರ್ ರೆಸಿಡೆಂಟ್ (ನಾನ್-ಬಾಂಡ್) ಡಾ. ದಿವ್ಯಾಂಶಿ ಶರ್ಮಾ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಇಎನ್‌ಟಿ ವಿಭಾಗದ ಕಾಯಂ ವೈದ್ಯರಾದ ಡಾ.ಅಭಿಷೇಕ್ ಶರ್ಮಾ ಹಾಗೂ ಮಕ್ಕಳ ವಿಭಾಗದ ಡಾ.ಇಮ್ರಾನ್ ಅವರನ್ನು ತಲಾ ಒಂದು ತಿಂಗಳ ಕಾಲ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಅವರು ತಿಳಿಸಿದರು.
ಥಾಲಿಯಾ ನಾಗ್ಲಾ ಪ್ರದೇಶದ ನಿವಾಸಿ ನಾಜಿಮ್ ಅವರು ಬುಧವಾರ ಮಧ್ಯಾಹ್ನ ಜ್ವರ ಕಾಣಿಸಿಕೊಂಡಿದ್ದ ತಮ್ಮ ಮಗು ಸೋಫಿಯಾಳನ್ನು ವೈದ್ಯಕೀಯ ಕಾಲೇಜಿಗೆ ಚಿಕಿತ್ಸೆ ಕರೆತಂದಿದ್ದರು. ವೈದ್ಯಕೀಯ ಕಾಲೇಜಿನಲ್ಲಿ ಮಕ್ಕಳ ವೈದ್ಯರು ಇರಲಿಲ್ಲ. ಆರೋಗ್ಯ ಸಿಬ್ಬಂದಿ ಕೂಡ ಬಾಲಕಿಯನ್ನು ವಿವಿಧ ಕೊಠಡಿಗಳಿಗೆ ಅಲೆದಾಡಿಸಿದ್ದರು. ಆದರೆ, ಸಕಾಲಕ್ಕೆ ಚಿಕಿತ್ಸೆ ಸಿಗದೆ ಬಾಲಕಿ ಮೃತಪಟ್ಟಿದ್ದಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.