ನವದೆಹಲಿ: ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಕೋರ್ಸ್‌ನ ನಡುವಿನಲ್ಲಿ ಯಾವುದೇ ಕಾರಣಕ್ಕೆ ಕಾಲೇಜು ತೊರೆದರೆ, ಅವರಿಂದ ಭಾರಿ ಪ್ರಮಾಣದಲ್ಲಿ ಶುಲ್ಕ ವಸೂಲು ಮಾಡಲು ಅವಕಾಶ ಕಲ್ಪಿಸುವಂತಹ ಬಾಂಡ್ ಬರೆಸಿಕೊಳ್ಳುವ ಪ್ರವೃತ್ತಿಯನ್ನು ಕೊನೆಗೊಳಿಸಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ತಿಳಿಸಿದೆ.
ಸ್ನಾತಕೋತ್ತರ ವೈದ್ಯಕೀಯ ಕಾಲೇಜುಗಳು ಇಂತಹ ಬಾಂಡ್ ಬರೆಸಿಕೊಳ್ಳುತ್ತಿವೆ ಎಂಬ ದೂರುಗಳನ್ನು ಆಧರಿಸಿ ಆಯೋಗವು ಈ ಸೂಚನೆ ನೀಡಿದೆ.
ಇಂತಹ ಬಾಂಡ್‌ಗಳು ವಿದ್ಯಾರ್ಥಿಗಳಲ್ಲಿ ಹಾಗೂ ಅವರ ಕುಟುಂಬದವರಲ್ಲಿ ಭಾರಿ ಪ್ರಮಾಣದ ಮಾನಸಿಕ ಒತ್ತಡ, ಆತಂಕ ಮತ್ತು ಖಿನ್ನತೆಗೆ ಕಾರಣವಾಗುತ್ತವೆ. ಇಂತಹ ಪರಿಸ್ಥಿತಿಗೆ ಸಿಲುಕುವ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆಯೂ ಇದೆ ಎಂದು ಆಯೋಗವು ಹೇಳಿದೆ.
ಕಳೆದ ಹತ್ತು ವರ್ಷಗಳಲ್ಲಿ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಸೀಟುಗಳ ಸಂಖ್ಯೆಯಲ್ಲಿ ಶೇಕಡ 117ರಷ್ಟು ಏರಿಕೆ ಆಗಿದೆ. ಹೀಗಾಗಿ, ಈ ದಿನಗಳಲ್ಲಿ ಸೀಟುಗಳು ವ್ಯರ್ಥವಾಗುವ ಸಾಧ್ಯತೆ ಕಡಿಮೆ ಎಂದು ಆಯೋಗದ ಪದವಿ ವಿಭಾಗದ ಅಧ್ಯಕ್ಷೆ ಅರುಣಾ ವಣಿಕರ್ ಅವರು ಪತ್ರದಲ್ಲಿ ಹೇಳಿದ್ದಾರೆ. ವಿದ್ಯಾರ್ಥಿಗಳು ನಡುವಿನಲ್ಲಿಯೇ ಕೋರ್ಸ್ ತೊರೆದರೆ ಸೀಟುಗಳು ವ್ಯರ್ಥವಾಗುತ್ತವೆ ಎಂಬ ಕಾರಣಕ್ಕಾಗಿ ಈ ಬಗೆಯ ಬಾಂಡ್ ಬರೆಸಿಕೊಳ್ಳುವ ಪದ್ಧತಿ ಆರಂಭವಾಗಿತ್ತು.
ಕೇಂದ್ರ ಆರೋಗ್ಯ ಸಚಿವಾಲಯದ ಬಳಿ ಇರುವ ಅಂಕಿ–ಅಂಶಗಳ ಪ್ರಕಾರ ವೈದ್ಯಕೀಯ ಸ್ನಾತಕೋತ್ತರ ಸೀಟುಗಳ ಸಂಖ್ಯೆಯು 2014ರಲ್ಲಿ 31,185 ಇದ್ದಿದ್ದು 2023ರ ಆಗಸ್ಟ್ ವೇಳೆಗೆ 67,802ಕ್ಕೆ ಹೆಚ್ಚಳವಾಗಿದೆ. ಇಂತಹ ಬಾಂಡ್ ಬರೆಸಿಕೊಳ್ಳುವ ಪದ್ಧತಿಯು ವರ್ಷಗಳಿಂದ ಇದೆ. ಮಧ್ಯದಲ್ಲಿಯೇ ಕೋರ್ಸ್ ಬಿಡುವ ವಿದ್ಯಾರ್ಥಿಯು ಪಾವತಿಸಬೇಕಿರುವ ಶುಲ್ಕದಲ್ಲಿ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಿದೆ.
ಕೆಲವು ಪ್ರಕರಣಗಳಲ್ಲಿ ವಿದ್ಯಾರ್ಥಿಗಳು ₹30 ಲಕ್ಷ ದಂಡ ಪಾವತಿಸಬೇಕಾಗಿತ್ತು. ಇದರಿಂದಾಗಿ ವಿದ್ಯಾರ್ಥಿಯೊಬ್ಬನ ಕುಟುಂಬವು ತನ್ನ ಜಮೀನು ಮಾರಾಟ ಮಾಡಬೇಕಾಯಿತು. ಇನ್ನೊಬ್ಬ ವಿದ್ಯಾರ್ಥಿಯ ಕುಟುಂಬವು ಪ್ರಧಾನಿಗೆ ಪತ್ರ ಬರೆದಿತ್ತು ಎಂದು ಆಯೋಗವು ವಿವರಿಸಿದೆ.
ಇಂತಹ ಬಾಂಡ್ ಬರೆಸಿಕೊಳ್ಳುವ ಪದ್ಧತಿಯನ್ನು ಕೊನೆಗೊಳಿಸುವುದರಿಂದ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯಲ್ಲಿ ಧನಾತ್ಮಕವಾದ ಬದಲಾವಣೆಯೊಂದು ಸಾಧ್ಯವಾಗಬಹುದು ಎಂದು ಆಯೋಗ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.