ನವದೆಹಲಿ: ದಕ್ಷಿಣ ರಾಜ್ಯಗಳ ವೈದ್ಯಕೀಯ ಕಾಲೇಜುಗಳಲ್ಲಿ ಹೊಸ ವೈದ್ಯಕೀಯ ಸೀಟುಗಳ ಸಂಖ್ಯೆ ಮೇಲೆ ಮಿತಿ ಹೇರುವ ಕುರಿತ ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ವಿವಾದಾತ್ಮಕ ಆದೇಶವನ್ನು ಮರು ಪರಿಶೀಲಿಸುವಂತೆ ಆರೋಗ್ಯ ಕುರಿತ ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ.
ಅಲ್ಲದೆ ‘ಪ್ರದೇಶ ಆಧರಿಸಿ ನಿರ್ದಿಷ್ಟ ಮಾನದಂಡಗಳನ್ನು’ ರಚಿಸುವಂತೆ ಸಮಿತಿ ಸಚಿವಾಲಯಕ್ಕೆ ತಿಳಿಸಿದೆ. ಸಮಿತಿಯು ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ವರದಿಯಲ್ಲಿ ಈ ಕುರಿತು ಪ್ರಸ್ತಾಪಿಸಿದೆ.
ಹೊಸ ವೈದ್ಯಕೀಯ ಕಾಲೇಜುಗಳನ್ನು ತೆರೆಯುವುದಕ್ಕೆ ಸಂಬಂಧಿಸಿದಂತೆ ಎಂಎನ್‌ಸಿ ಮಾನದಂಡಗಳನ್ನು ಪ್ರಕಟಿಸಿದ ಆರು ತಿಂಗಳ ನಂತರ ಸ್ಥಾಯಿ ಸಮಿತಿ ಈ ಕುರಿತು ಶಿಫಾರಸು ಮಾಡಿದೆ.
‘ಪ್ರತಿ 10 ಲಕ್ಷ ಜನಸಂಖ್ಯೆಗೆ 100 ಎಂಬಿಬಿಎಸ್ ಸೀಟುಗಳು ಇರಬೇಕು ಎಂಬ ಮಾನದಂಡ ಇದ್ದರೆ ದಕ್ಷಿಣದ ಯಾವುದೇ ರಾಜ್ಯಗಳು ಹೊಸ ವೈದ್ಯಕೀಯ ಕಾಲೇಜುಗಳನ್ನು ತೆರೆಯಲು ಸಾಧ್ಯವಿಲ್ಲ. ಏಕೆಂದರೆ ಪ್ರಸ್ತುತ ಈ ರಾಜ್ಯಗಳಲ್ಲಿನ ಎಂಬಿಬಿಎಸ್ ಸೀಟುಗಳ ಸಂಖ್ಯೆಯು ಜನಸಂಖ್ಯೆ ಆಧಾರಿತ ಮಿತಿಯನ್ನು ಮೀರಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
2021ರ ವೇಳೆಗೆ ತಮಿಳುನಾಡಿನ ಅಂದಾಜು ಜನಸಂಖ್ಯೆ 7.64 ಕೋಟಿ ಆಗಿದ್ದು 11,600 ಎಂಬಿಬಿಎಸ್ ಸೀಟುಗಳನ್ನು ಹೊಂದಿದೆ. ಕರ್ನಾಟಕವು 11,695 (6.68 ಕೋಟಿ ಜನಸಂಖ್ಯೆ), ಆಂಧ್ರ ಪ್ರದೇಶದಲ್ಲಿ 6,435 (5.27 ಕೋಟಿ), ಕೇರಳ 4,655 (3.54 ಕೋಟಿ), ತೆಲಂಗಾಣದಲ್ಲಿ 8,540 ಸೀಟುಗಳು (3.77 ಕೋಟಿ) ಇವೆ.
ಆದರೆ, ಎನ್‌ಎಂಸಿ ಮಾನದಂಡದ ಪ್ರಕಾರ ತಮಿಳುನಾಡಿನಲ್ಲಿ 7,600 ಸೀಟುಗಳು, ಕರ್ನಾಟಕದಲ್ಲಿ 6,700, ಆಂಧ್ರ ಪ್ರದೇಶದಲ್ಲಿ 5,300, ಕೇರಳದಲ್ಲಿ 3,500 ಹಾಗೂ ತೆಲಂಗಾಣದಲ್ಲಿ 3,700 ಸೀಟುಗಳು ಮಾತ್ರ ಇರಬೇಕಾಗುತ್ತವೆ ಎಂಬುದನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ಈ ಕುರಿತು ಎನ್‌ಎಂಸಿ ಹೊರಡಿಸಿರುವ ಅಧಿಸೂಚನೆ ನ್ಯಾಯೋಚಿತವಾಗಿಲ್ಲ. ಜತೆಗೆ ದಕ್ಷಿಣ ರಾಜ್ಯಗಳು ಕೇಂದ್ರದ ವಿರುದ್ಧ ರಾಜಕೀಯ ತಿಕ್ಕಾಟ ನಡೆಸುವುದಕ್ಕೆ ಇದು ದಾರಿ ಮಾಡಿಕೊಡುತ್ತದೆ ಎಂದು ಸಮಿತಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.