ಚೆನ್ನೈ: ಶುಕ್ರವಾರ ರಾತ್ರಿ 8.30ರ ಸುಮಾರಿಗೆ ಕವರೈಪಟ್ಟೈ ರೈಲು ನಿಲ್ದಾಣದ ಸಮೀಪ ಭಾರಿ ಶಬ್ದ ಕೇಳಿಸಿತು. ಕೂಡಲೇ ಅತ್ತ ಓಡಿದೆವು. ಹಳಿ ತಪ್ಪಿ ಬಿದ್ದ ಬೋಗಿಗಳಡಿ ಸಿಲುಕಿದ್ದ ಜನರನ್ನು ರಕ್ಷಿಸಲು ಮುಂದಾದೆವು ಎಂದು ಸ್ಥಳೀಯರೊಬ್ಬರು ವಿವರಿಸಿದರು.
ಕೂಡಲೆ ಪೊಲೀಸ್ ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದೆವು ಎಂದು ತಿಳಿಸಿದರು.
ರೈಲು ನಿಲ್ದಾಣದಿಂದ 100 ಮೀಟರ್ ದೂರದಲ್ಲಿ ವಾಸಿಸುತ್ತಿರುವ ಬಾಲಕೃಷ್ಣನ್ ಎಂಬುವರು, ‘ರೈಲು ಬೋಗಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡಿತು. ಅವುಗಳಲ್ಲಿ ಸಿಲುಕಿದ ಪ್ರಯಾಣಿಕರ ರಕ್ಷಣೆಗೆ ಶಕ್ತಿ ಮೀರಿ ಪ್ರಯತ್ನಿಸಿದೆವು. ಸಹಾಯಕ್ಕಾಗಿ ಜನರು ಅಂಗಲಾಚುತ್ತಿದ್ದರು’ ಎಂದು ಹೇಳಿದರು.
‘ಅವಘಡ ನಡೆದ ಸ್ಥಳಕ್ಕೆ ಹೋಗುತ್ತಿರುವಾಗಲೇ ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡಿದ್ದು ಕಾಣಿಸಿತು. ಬೋಗಿಗಳಡಿ ಹಲವರು ಪ್ರಯಾಣಿಕರು ಇರುವುದು ತಿಳಿಯಿತು. ಅವರಿಗೆ ಸಹಾಯ ಮಾಡಿದೆವು. ಕೆಲವರಿಗೆ ಕೈಗಳಿಗೆ, ಮತ್ತೆ ಕೆಲವರಿಗೆ ಕಾಲುಗಳಿಗೆ ಗಾಯವಾಗಿತ್ತು. ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕಳುಹಿಸಿದೆವು ಎಂದು ಮತ್ತೊಬ್ಬ ನಿವಾಸಿ ವೇತ್ರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.