ADVERTISEMENT

ಬೆಂಗಳೂರು ಕೋರ್ಟ್‌ಗೆ ರಾಹುಲ್; ಸುಲ್ತಾನಪುರ ನ್ಯಾಯಾಲಯದಲ್ಲಿ ವಿಚಾರಣೆ ಮುಂದೂಡಿಕೆ

ಪಿಟಿಐ
Published 7 ಜೂನ್ 2024, 5:54 IST
Last Updated 7 ಜೂನ್ 2024, 5:54 IST
   

ಸುಲ್ತಾನಪುರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಮಾನನಷ್ಟ ಪ್ರಕರಣದ ವಿಚಾರಣೆಯನ್ನು ಇಲ್ಲಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೂನ್‌ 18ಕ್ಕೆ ಮುಂದೂಡಿದೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಗುರಿಯಾಗಿಸಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ರಾಹುಲ್‌ ಮೇಲಿದೆ.

'ವಕೀಲರೊಬ್ಬರ ನಿಧನದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಶುಕ್ರವಾರ ಸಂತಾಪ ಸಭೆ ನಡೆಸಲಾಯಿತು. ವಿಚಾರಣೆಯನ್ನು ಜೂನ್ 18ಕ್ಕೆ ಮುಂದೂಡಲಾಗಿದೆ' ಎಂದು ರಾಹುಲ್‌ ಪರ ವಕೀಲ ಕಾಶಿ ಪ್ರಸಾದ್‌ ಶುಕ್ಲಾ ತಿಳಿಸಿದ್ದಾರೆ.

ADVERTISEMENT

ಬಿಜೆಪಿ ನಾಯಕ ವಿಜಯ್ ಮಿಶ್ರಾ ಅವರು ದಾಖಲಿಸಿರುವ ಈ ಪ್ರಕರಣದ ವಿಚಾರಣೆ ಸಲುವಾಗಿ ಫೆಬ್ರುವರಿಯಲ್ಲಿ ಕೋರ್ಟ್‌ಗೆ ಹಾಜರಾಗಿದ್ದ ರಾಹುಲ್‌ಗೆ ಈಗಾಗಲೇ ಜಾಮೀನು ದೊರೆತಿದೆ.

ಕಳೆದ ಡಿಸೆಂಬರ್‌ನಲ್ಲಿ ವಾರಂಟ್‌ ನೀಡಿತ್ತು. ಅಮೇಠಿಯಲ್ಲಿ 'ಭಾರತ್‌ ಜೋಡೊ ಯಾತ್ರೆ'ಯಲ್ಲಿ ಪಾಲ್ಗೊಂಡಿದ್ದ ಅವರು ವಾರಂಟ್‌ ಬೆನ್ನಲ್ಲೇ ಫೆಬ್ರುವರಿ 20ರಂದು ವಿಚಾರಣೆಗೆ ಹಾಜರಾಗಿದ್ದರು.

2018ರ ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಮಿತ್‌ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದಲ್ಲಿ ರಾಹುಲ್‌ ವಿರುದ್ಧ ಅದೇ ವರ್ಷ ಆಗಸ್ಟ್‌ 4ರಂದು ಪ್ರಕರಣ ದಾಖಲಾಗಿದೆ.

ಪ್ರಾಮಾಣಿಕ ಮತ್ತು ಸ್ವಚ್ಛ ರಾಜಕಾರಣದಲ್ಲಿ ನಂಬಿಕೆ ಇಟ್ಟಿರುವುದಾಗಿ ಬಿಜೆಪಿ ಹೇಳಿಕೊಳ್ಳುತ್ತದೆ. ಆದರೆ, ಕೊಲೆ ಪ್ರಕರಣದ 'ಆರೋಪಿ'ಯಾಗಿರುವವರನ್ನು ಅಧ್ಯಕ್ಷರನ್ನಾಗಿ ಹೊಂದಿದೆ ಎಂದು ರಾಹುಲ್‌ ಹೇಳಿಕೆ ನೀಡಿದ್ದರು. ಆಗ ಅಮಿತ್‌ ಶಾ ಬಿಜೆಪಿ ಅಧ್ಯಕ್ಷರಾಗಿದ್ದರು.

2005ರಲ್ಲಿ ಅಮಿತ್‌ ಶಾ ಅವರು ಗುಜರಾತ್‌ ಗೃಹ ಸಚಿವರಾಗಿದ್ದಾಗ ನಕಲಿ ಎನ್‌ಕೌಂಟರ್‌ ನಡೆದಿದೆ ಎನ್ನಲಾಗಿತ್ತು. ಆದರೆ, ರಾಹುಲ್‌ ಅವರು 'ಕೊಲೆ ಆರೋಪಿ' ಎಂದು ಹೇಳುವುದಕ್ಕೂ ನಾಲ್ಕು ವರ್ಷ ಮೊದಲೇ ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯವು ಅಮಿತ್‌ ಶಾ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿತ್ತು.

ಬೆಂಗಳೂರು ಕೋರ್ಟ್‌ಗೆ ರಾಹುಲ್‌
ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪತ್ರಿಕೆಗಳಲ್ಲಿ ಸುಳ್ಳು ಜಾಹೀರಾತು ನೀಡಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಮಾನನಷ್ಟ ಮೊಕದ್ದಮೆ ದಾಖಲಿಸಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆಗೆ ಖುದ್ದಾಗಿ ಹಾಜರಾಗಲು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬೆಂಗಳೂರಿಗೆ ಬಂದಿದ್ದಾರೆ.

ಇದೇ ಪ್ರಕರಣದಲ್ಲಿ ಆರೋಪಿಗಳಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.