ADVERTISEMENT

ತಾಜ್‌ ಮಹಲ್‌ ಇತಿಹಾಸದ ತನಿಖೆ: ಅರ್ಜಿ ವಿಚಾರಣೆ ಮೇ 12ಕ್ಕೆ ಮುಂದೂಡಿಕೆ

ಪಿಟಿಐ
Published 10 ಮೇ 2022, 11:02 IST
Last Updated 10 ಮೇ 2022, 11:02 IST
ತಾಜ್‌ ಮಹಲ್‌ (ಸಾಂದರ್ಭಿಕ ಚಿತ್ರ)
ತಾಜ್‌ ಮಹಲ್‌ (ಸಾಂದರ್ಭಿಕ ಚಿತ್ರ)   

ಲಖನೌ: ತಾಜ್‌ ಮಹಲ್‌ನ ‘ಇತಿಹಾಸ’ವನ್ನು ತಿಳಿಯಲು ಸತ್ಯಶೋಧನಾ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಅಲಹಾಬಾದ್ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ವಕೀಲರ ಮುಷ್ಕರದ ಕಾರಣ ಗುರುವಾರಕ್ಕೆ ಮುಂದೂಡಲಾಗಿದೆ.

ಬಿಜೆಪಿ ಅಯೋಧ್ಯಾ ಘಟಕದ ಮಾಧ್ಯಮ ಉಸ್ತುವಾರಿ ರಜನೀಶ್ ಸಿಂಗ್‌ ಅವರು ಈ ಬಗ್ಗೆ ಹೈಕೋರ್ಟ್‌ನ ಲಖನೌ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿಗಳಾದ ಡಿ.ಕೆ.ಉಪಾಧ್ಯಾಯ, ಸುಭಾಷ್‌ ವಿದ್ಯಾರ್ಥಿ ಅವರಿದ್ದ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಯಬೇಕಿತ್ತು.

ಸತ್ಯಶೋಧನಾ ತನಿಖೆಗೆ ಆದೇಶಿಸಬೇಕು ಹಾಗೂ ಇತಿಹಾಸ ತಿಳಿಯಲು ಅಲ್ಲಿನ 22 ಕೊಠಡಿಗಳ ಬೀಗಮುದ್ರೆ ತೆರವುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ADVERTISEMENT

ಆದರೆ, ವಿಚಾರಣೆಗೆ ಹೊಸ ಅರ್ಜಿಗಳನ್ನು ಪಟ್ಟಿಮಾಡುವಾಗ ದಿನಾಂಕ ನಿಗದಿ ಕ್ರಮವನ್ನು ಪ್ರತಿಭಟಿಸಿ ಪ್ರಯಾಗ್‌ರಾಜ್‌ ಮತ್ತು ಲಖನೌ ಎರಡೂ ಕಡೆ ಕಲಾಪ ಬಹಿಷ್ಕರಿಸಿದ್ದರು. ಹೀಗಾಗಿ, ವಿಚಾರಣೆ ಮುಂದೂಡಲಾಯಿತು.

ಮೊಘಲ್‌ ಆಡಳಿತಾವಧಿಯಲ್ಲಿ ನಿರ್ಮಿಸಲಾಗಿರುವ ತಾಜ್ ಮಹಲ್‌ನ ಸ್ಥಳದಲ್ಲಿ ಅದಕ್ಕೂ ಹಿಂದೆ ಶಿವನ ದೇವಸ್ಥಾನ ಇತ್ತು ಎಂದು ಹಿಂದೂಪರ ಸಂಘಟನೆಗಳು ಪ್ರತಿಪಾದಿಸಿವೆ. ಸದ್ಯ, ಈ ಸ್ಮಾರಕವನ್ನು ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆ ಸಂರಕ್ಷಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.