ADVERTISEMENT

ದೆಹಲಿ ಗಲಭೆ ಪ್ರಕರಣ: ಉಮರ್‌ ಖಾಲಿದ್‌ ಜಾಮೀನು ಅರ್ಜಿಯ ವಿಚಾರಣೆ 4 ವಾರ ಮುಂದಕ್ಕೆ

ಪಿಟಿಐ
Published 12 ಸೆಪ್ಟೆಂಬರ್ 2023, 8:17 IST
Last Updated 12 ಸೆಪ್ಟೆಂಬರ್ 2023, 8:17 IST
   

ನವದೆಹಲಿ: 2020ರ ಈಶಾನ್ಯ ದೆಹಲಿ ಗಲಭೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ತಮ್ಮ ಮೇಲೆ ಯುಎಪಿಎ ಕಾಯ್ದೆಯಡಿ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ಕೋರಿ ಜೆಎನ್‌ಯುನ ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ 4 ವಾರಗಳ ಕಾಲ ಮುಂದೂಡಿದೆ.

‌ಪ್ರಕರಣ ಸಂಬಂಧ ವಿಸ್ಕೃತ ವಿಚಾರಣೆ ಅಗತ್ಯ ಇದೆ ಎಂದು ಅಭಿಪ್ರಾಯ ಪಟ್ಟ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್‌ ಹಾಗೂ ಬೆಲಾ ಎಂ ತ್ರಿವೇದಿ ಅವರಿದ್ಧ ಪೀಠ ವಿಚಾರಣೆಯನ್ನು 4 ವಾರಗಳ ಕಾಲ ಮುಂದೂಡಿತು.

‘ಈ ಪ್ರಕರಣದಲ್ಲಿ ನಾವು ಪ್ರತಿಯೊಂದು ದಾಖಲೆಗಳನ್ನು ಪರಿಶೀಲನೆ ನಡೆಸಬೇಕಿದೆ. ಪ್ರಕರಣ ಸಂಬಂಧ ನಿಮ್ಮ ಬಳಿ ಇರುವ ದಾಖಲೆಯನ್ನು ಸಲ್ಲಿಸಿ’ ಎಂದು ಖಾಲಿದ್‌ ಪರ ಹಾಜರಾದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರಿಗೆ ಪೀಠ ಸೂಚಿಸಿತು.

ADVERTISEMENT

ಪ್ರಕರಣ ಸಂಬಂಧ 2022ರ ಅಕ್ಟೋಬರ್‌ 18 ರಂದು ದೆಹಲಿ ಹೈಕೋರ್ಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಖಾಲಿದ್‌ ಅವರಿಗೆ ಉಳಿದ ಆರೋಪಿಗಳ ಜತೆ ಸಂಬಂಧ ಇತ್ತು. ಹೀಗಾಗಿ ಅವರ ಮೇಲಿನ ಆರೋಪ ಮೇಲ್ನೋಟಕ್ಕೆ ನಿಜವೆಂದು ತೋರುತ್ತದೆ. ಆರೋಪಿಯ ಕೃತ್ಯಗಳು ಪ್ರಾಥಮಿಕವಾಗಿ ಯುಎಪಿಎ ಕಾಯ್ದೆಯಡಿ ‘ಭಯೋತ್ಪಾದಕ ಕೃತ್ಯ’ ಎಂದು ಅರ್ಹತೆ ಪಡೆದಿದೆ ಎಂದು ಕೋರ್ಟ್‌ ಹೇಳಿತ್ತು.

53 ಮಂದಿಯ ಸಾವು ಹಾಗೂ 700 ಮಂದಿ ಗಾಯಗೊಳ್ಳಲು ಕಾರಣವಾದ ಈ ಘಟನೆಯ ಹಿಂದೆ ‘ಮಾಸ್ಟರ್‌ ಮೈಂಡ್‌’ಗಳಾಗಿ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿ ಖಾಲಿದ್‌, ಶಾರ್ಜಿಲ್ ಇಮಾಮ್ ಸಹಿತ ಹಲವರ ಮೇಲೆ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.