ADVERTISEMENT

ಹಿಮಾಚಲ ಪ್ರದೇಶ: ಭಾರಿ ಮಳೆಗೆ 22 ಸಾವು

ಉಕ್ಕಿ ಹರಿಯುತ್ತಿರುವ ಬಿಯಾಸ್‌ ನದಿ * ಭೂಕುಸಿತ, ಸಂಚಾರ ಅಸ್ತವ್ಯಸ್ತ

ಪಿಟಿಐ
Published 18 ಆಗಸ್ಟ್ 2019, 20:13 IST
Last Updated 18 ಆಗಸ್ಟ್ 2019, 20:13 IST
ಶಿಮ್ಲಾದಲ್ಲಿ ಸುರಿದ ಭಾರಿ ಮಳೆಗೆ ಭೂಕುಸಿತ ಉಂಟಾಗಿದ್ದು, ವಾಹನಗಳು ಉರುಳಿರುವುದು –ಪಿಟಿಐ ಚಿತ್ರ
ಶಿಮ್ಲಾದಲ್ಲಿ ಸುರಿದ ಭಾರಿ ಮಳೆಗೆ ಭೂಕುಸಿತ ಉಂಟಾಗಿದ್ದು, ವಾಹನಗಳು ಉರುಳಿರುವುದು –ಪಿಟಿಐ ಚಿತ್ರ   

ಶಿಮ್ಲಾ: ಭಾರಿ ಮಳೆ ಮತ್ತು ಭೂಕುಸಿತಕ್ಕೆ ಹಿಮಾಚಲ ಪ್ರದೇಶದಲ್ಲಿ 22 ಮಂದಿ ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಭಾನುವಾರ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.‌

ಶಿಮ್ಲಾದ ಆರ್‌ಟಿಒ ಕಚೇರಿ ಎದುರು ಉಂಟಾದ ಭೂಕುಸಿತಕ್ಕೆ ಸಿಲುಕಿ 3 ಮಂದಿ ಸಾವನ್ನಪ್ಪಿದರೆ, ನಾರ್ಕಂಡ್‌ ಪ್ರದೇಶದಲ್ಲಿ ಮರ ಉರುಳಿ ಬಿದ್ದ ಪರಿಣಾಮ ಇಬ್ಬರು ನೇಪಾಳಿ ಪ್ರಜೆಗಳು ಮೃತಪಟ್ಟಿದ್ದಾರೆ. ಮನೆ ಕುಸಿತಕ್ಕೆ ಕಾರ್ಮಿಕ ಬಲಿಯಾಗಿದ್ದು, ಬಿಹಾರದ ಕೃಷ್ಣಗಂಜ್‌ ಜಿಲ್ಲೆಯ ಶಾ ಆಲಂ ಎಂದು ಗುರುತಿಸಲಾಗಿದೆ. ಚಂಬಾ ಜಿಲ್ಲೆಯಲ್ಲಿ ಮನೆ ಗೋಡೆ ಕುಸಿತಕ್ಕೆ ಇಬ್ಬರು ಮೃತಪಟ್ಟಿದ್ದಾರೆ.

ಕುಲು ಜಿಲ್ಲೆಯಲ್ಲಿ ಬಿಯಾಸ್‌ ನದಿ ಉಕ್ಕಿ ಹರಿಯುತ್ತಿದ್ದು, ಸೇತುವೆಯೊಂದು ಕುಸಿದಿದೆ.ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಹಲವು ರಸ್ತೆಗಳುಬಿರುಕು ಬಿಟ್ಟಿವೆ. ಕುಲು–ಮನಾಲಿ ನಗರಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಉಂಟಾಗಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ. ವಿದ್ಯುತ್‌ ಕಂಬಗಳು ಮತ್ತು ಮರಗಳು ಉರುಳಿವೆ. ರಸ್ತೆ ಬದಿ ನಿಂತಿದ್ದ ವಾಹನಗಳು ಭೂಕುಸಿತಕ್ಕೆ ಕಣಿವೆಗೆ ಜಾರಿವೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ತೊಡಗಿದ್ದಾರೆ.

ADVERTISEMENT

ಶಾಲಾ ಕಾಲೇಜುಗಳಿಗೆ ರಜೆ: ಸೋಮವಾರವೂ ಭಾರಿ ಮಳೆ ಸುರಿಯಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕುಲು, ಚಂಬಾ ಮತ್ತು ಶಿಮ್ಲಾ ಜಿಲ್ಲೆಗಳ ಶಾಲಾ– ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಉತ್ತರಾಖಂಡದಲ್ಲಿ ಮೇಘಸ್ಫೋಟ
ಡೆಹ್ರಾಡೂನ್‌(ಪಿಟಿಐ):
ಉತ್ತರಾಖಂಡದ ವಿವಿಧೆಡೆ ಭಾನುವಾರ ಸುರಿದ ಭಾರಿ ಮಳೆ ಹಾಗೂ ಮೇಘಸ್ಫೋಟಕ್ಕೆ ಕನಿಷ್ಠ 8 ಮಂದಿ ನಾಪತ್ತೆಯಾಗಿದ್ದು, ಹಲವರು ಗಾಯಗೊಂಡಿದ್ದಾರೆ.

ಉತ್ತರಕಾಶಿ ಜಿಲ್ಲೆಯ ಮೋರಿ ಬ್ಲಾಕ್‌ನಲ್ಲಿ ಮೇಘಸ್ಫೋಟ ಸಂಭವಿಸಿ ಅರಕೋಟ್‌, ಮಾಕುರಿ ಮತ್ತು ಟಿಕೋಚಿ ಗ್ರಾಮಗಳಲ್ಲಿ ಮನೆಗಳು ಹಾನಿಗೀಡಾಗಿವೆ.

ಮಳೆ ತೀವ್ರವಾಗಿರುವ ಕಾರಣ ರಾಜ್ಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಸಲು ತೊಂದರೆಯಾಗುತ್ತಿದೆ ಎಂದು ಹೇಳಿದ್ದಾರೆ.

ಭೂಕುಸಿತದಿಂದಾಗಿ ಚಾರ್‌ಧಾಮ್‌ ಯಾತ್ರೆಗೆ ತೆರಳುವ ಮಾರ್ಗದಲ್ಲೂ ಸಂಚಾರಕ್ಕೆ ತಡೆಯುಂಟಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.