ತಿರುವನಂತಪುರಂ: ಕೇರಳದಲ್ಲಿ ಮಳೆ ಅಬ್ಬರ ಜಾಸ್ತಿಯಾಗುತ್ತಿದ್ದು ಇಲ್ಲಿಯವರೆಗೆ 22 ಮಂದಿ ಸಾವಿಗೀಡಾಗಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.ಪ್ರಳಯವನ್ನು ಎದುರಿಸಲು ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದಿದ್ದಾರೆ ಪಿಣರಾಯಿ. ಶುಕ್ರವಾರ ಕೇರಳದಲ್ಲಿ ಸಾವಿಗೀಡಾವರ ಸಂಖ್ಯೆ 12.
ಅದೇ ವೇಳೆ ಭೂಕುಸಿತ ಸಂಭವಿಸಿದ ಮೇಪ್ಪಾಡಿ ಪುತ್ತುಮಲದಲ್ಲಿ 7 ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಮಾತೃಭೂಮಿ ಪತ್ರಿಕೆ ವರದಿ ಮಾಡಿದ್ದು ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎಂದಿದೆ.
ದೊಡ್ಡ ಜಲಾಶಯಗಳಿಂದ ನೀರು ಹೊರಹರಿಯಡಬೇಕಾದ ಅಗತ್ಯ ಬಂದೊದಗುವುದಿಲ್ಲ ಎಂದು ಸಚಿವ ಎಂ.ಎಂ ಮಾಣಿ ಹೇಳಿದ್ದಾರೆ. ಇಡುಕ್ಕಿ ಸೇರಿದಂತೆ ಇತರ ದೊಡ್ಡ ಜಲಾಶಯಗಳಿಂದ ನೀರು ಹರಿಯಬಿಡಬೇಕಾದ ಪರಿಸ್ಥಿತಿ ಈಗ ಇಲ್ಲ.
ಪ್ರಸ್ತುತ ಕಲ್ಲಾರ್‌ಕುಟ್ಟಿ, ಕಕ್ಕಯಂ ಮೊದಲಾದ ಚಿಕ್ಕಜಲಾಶಯಗಳಿಂದ ನೀರು ಹೊರಬಿಡಲಾಗಿದೆ ಎಂದು ಮಾಣಿ ಹೇಳಿದ್ದಾರೆ.
ಕ್ಷಣ ಕ್ಷಣದ ಸುದ್ದಿ
* ತಾಮರಶ್ಶೇರಿ ಚುರಂ (ತಾಮರಶ್ಶೇರಿ ಘಾಟ್ )ನಲ್ಲಿ ಹೆವೀ ವಾಹನಗಳ ಸಂಚಾರ ರದ್ದುಗೊಳಿಸಲಾಗಿದೆ ಎಂದು ಕೋಯಿಕ್ಕೋಡ್ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
* ಆಲುವಾ ದ್ವೀಪ ಮುಳುಗಿದ್ದು 550 ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಕರೆದೊಯ್ಯಲಾಗಿದೆ.
* ಕೋಯಿಕ್ಕೋಡ್- ಮೈಸೂರು ರಸ್ತೆ ಸಂಚಾರ ಸ್ಥಗಿತ
ವಯನಾಡ್ -ಮುತ್ತಂಞ- ಪೊನ್‌ಕುಳಿಯಲ್ಲಿ ನೀರು ತುಂಬಿದ್ದ ಕಾರಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತವಾಗಿದೆ. ವಯನಾಡ್ -ಗುಂಡ್ಲುಪೇಟೆ ರಸ್ತೆ 13 ಕೆಎಸ್‌ಆರ್‌ಟಿಸಿ ಬಸ್ಸುಗಳು ಸಿಲುಕಿಕೊಂಡಿದ್ದು, 200 ಮಂದಿ ಪ್ರಯಾಣಿಕರು ಬಸ್ಸಿನಲ್ಲಿದ್ದಾರೆ. ಪ್ರಯಾಣಿಕರಲ್ಲಿ ಕೆಲವರು ಮೈಸೂರಿಗೆ ವಾಪಸ್ ಹೋಗಿದ್ದಾರೆ.
ಕಣ್ಣೂರು ಶ್ರೀಕಂಠಪುರ ಮುಳಗಡೆ
ಕಣ್ಣೂರು ಜಿಲ್ಲೆಯ ಶ್ರೀಕಂಠಪುರ ನಗರ ಸಂಪೂರ್ಣ ಮುಳುಗಡೆಯಾಗಿದೆ.ಹೊಳೆಗಳೆಲ್ಲವೂ ಮೈತುಂಬಿ ಹರಿಯುತ್ತಿದ್ದು ಈ ನಗರ ಬೇರೆ ಪ್ರದೇಶಗಳೊಂದಿಗೆ ಸಂಪರ್ಕ ಕಡಿದುಕೊಂಡಿದೆ.
ತಳಿಪ್ಪರಂಬ್, ಇರಿಕ್ಕೂರ್, ಪಯ್ಯಾವೂರ್, ಮಯ್ಯಿಲ್ ಮೊದಲಾದ ಸ್ಥಳಗಿಳಿಂದ ಶ್ರೀಕಂಠಪುರಕ್ಕೆ ಹೋಗುವ ಎಲ್ಲ ದಾರಿಗಳು ಜಲಾವೃತವಾಗಿವೆ.
ಸಹಾಯ ಬೇಡಿದ ಮಲಪ್ಪುರಂ ಜಿಲ್ಲಾಧಿಕಾರಿ
ಪ್ರಳಯ ಪೀಡಿತ ಮಲಪ್ಪುರಂ ಜಿಲ್ಲೆಗೆ ಸಹಾಯ ಮಾಡಲು ವೈದ್ಯರು, ನರ್ಸ್ ಮತ್ತು ಸ್ವಯಂ ಸೇವಕರು ಬೇಕಾಗಿದ್ದಾರೆ ಎಂದು ಮಲಪ್ಪುರಂ ಜಿಲ್ಲಾಧಿಕಾರಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.
ಇದನ್ನೂ ಓದಿ:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.