ADVERTISEMENT

ಒಡಿಶಾದಲ್ಲಿ ಭಾರಿ ಮಳೆ | ರಸ್ತೆಗಳು ಜಲಾವೃತ; 23 ಕುಟುಂಬಗಳ ಸ್ಥಳಾಂತರ

ಪಿಟಿಐ
Published 20 ಜುಲೈ 2024, 10:14 IST
Last Updated 20 ಜುಲೈ 2024, 10:14 IST
<div class="paragraphs"><p>ಒಡಿಶಾದಲ್ಲಿ ಮಳೆ</p></div>

ಒಡಿಶಾದಲ್ಲಿ ಮಳೆ

   

– ಪಿಟಿಐ ಕಡತ ಚಿತ್ರ

ಭುವನೇಶ್ವರ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿದ ಪರಿಣಾಮ ಒಡಿಶಾದಲ್ಲಿ ಭಾರಿ ಮಳೆಯಾಗುತ್ತಿದೆ. ಹೆಚ್ಚು ಮಳೆ ಬಿದ್ದ ಮಲ್ಕನಗಿರಿ ಜಿಲ್ಲೆಯಲ್ಲಿ ಪ್ರವಾಹ‍‍ಪೀಡಿತ ‍ಪ್ರದೇಶದಲ್ಲಿದ್ದ ಕನಿಷ್ಠ 23 ಕುಟುಂಬಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಮುಂದಿನ ಐದು ದಿನ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ADVERTISEMENT

ಮಲ್ಕನಗಿರಿ ಜಿಲ್ಲೆಯ ಚಿತ್ರಕೊಂಡ ಹಾಗೂ ಕೊರ್ಕುಂಡದಲ್ಲಿ ಕ್ರಮವಾಗಿ 22.05 ಸೆಂ.ಮೀ. ಹಾಗೂ 21.7 ಸೆಂ.ಮೀ ಮಳೆಯಾಗಿದೆ ಎಂದು ಭುವನೇಶ್ವರ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಶನಿವಾರ ಬೆಳಿಗ್ಗೆ ವಾಯುಭಾರ ಕುಸಿತವು ಪುರಿಯ ದಕ್ಷಿಣ-ನೈಋತ್ಯಕ್ಕೆ 40 ಕಿ.ಮೀ ಮತ್ತು ಗೋಪಾಲಪುರದಿಂದ 70 ಕಿ.ಮೀ ಪೂರ್ವ-ಈಶಾನ್ಯದಲ್ಲಿ ಸೃಷ್ಟಿಯಾಗಿದೆ . ಗಾಳಿಯು ಒಡಿಶಾ ಮತ್ತು ಛತ್ತೀಸಗಢದಾದ್ಯಂತ ಪಶ್ಚಿಮ-ವಾಯವ್ಯದ ಕಡೆಗೆ ಚಲಿಸಿ 24 ಗಂಟೆಗಳಲ್ಲಿ ಕ್ರಮೇಣ ದುರ್ಬಲಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಬುಲೆಟಿನ್‌ನಲ್ಲಿ ತಿಳಿಸಿದೆ.

ಇದರ ಪ್ರಭಾವದಿಂದಾಗಿ ಒಡಿಶಾದಲ್ಲಿ ಭಾರಿ ಮಳೆಯಾಗಲಿದ್ದು, ಮುಂದಿನ ಐದು ದಿನಗಳಲ್ಲಿ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ತಗ್ಗು ಪ‍್ರದೇಶಗಳು ಜಲಾವೃತಗೊಳ್ಳಲಿದ್ದು, ಕಡಿಮೆ ಗೋಚರತೆಯಿಂದಾಗಿ ಸಂಚಾರಕ್ಕೆ ತೊಡಕಾಗುವ ಎಚ್ಚರಿಕೆಯನ್ನೂ ಇಲಾಖೆ ನೀಡಿದೆ.

ಜುಲೈ 21 ರಂದು, ಮಯೂರ್‌ಭಂಜ್, ಕಿಯೋಂಜರ್, ಸುಂದರಗಢ, ಜರ್ಸುಗುಡಾ, ಸಂಬಲ್‌ಪುರ, ದಿಯೋಗಢ ಮತ್ತು ಬರ್ಗಢ್‌ನ ಕೆಲವು ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಜುಲೈ 22ರಂದು ಮಯೂರ್‌ಭಂಜ್, ಕಿಯೋಂಜಾರ್, ಸುಂದರಗಢ, ಜಾರ್ಸುಗುಡಾ, ಸಂಬಲ್‌ಪುರ, ದಿಯೋಗಢ, ಅಂಗುಲ್ ಮತ್ತು ಧೆಂಕನಾಲ್‌ನ ಕೆಲವು ಸ್ಥಳಗಳಲ್ಲಿ ಭಾರಿ ಮಳೆ ಮುಂದುವರಿಯಬಹುದು.

ಜುಲೈ 23 ರಂದು ಕಿಯೋಂಜಾರ್, ಮಯೂರ್‌ಭಂಜ್, ಜಾರ್ಸುಗುಡಾ ಮತ್ತು ಸುಂದರ್ಗಢ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪರಿಸ್ಥಿತಿಯನ್ನು ಅವಲೋಕಿಸಿದ ಒಡಿಶಾ ವಿಪತ್ತು ನಿರ್ವಹಣಾ ಸಚಿವ ಸುರೇಶ್ ಪೂಜಾರಿ, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಹೇಳಿದರು.

ಮಲ್ಕನಗಿರಿ ಜಿಲ್ಲೆಯ ಸೇತುವೆಗಳ ಮೇಲೆ ಮಳೆನೀರು ಹರಿಯುತ್ತಿದ್ದು, ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸಂಚಾರಕ್ಕೆ ತೊಡಕಾಗಿದೆ.

ಸೇತುವೆಗಳನ್ನು ಜನರು ಬಳಸದಂತೆ ತಡೆಯಲು ಪೊಲೀಸರನ್ನು ನಿಯೋಜಿಸಲಾಗಿದ್ದು, ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ತಹಶೀಲ್ದಾರ್ ಮತ್ತು ಬಿಡಿಒಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ.

ನೀರು ಕಡಿಮೆಯಾಗುವವರೆಗೆ ಮುಳುಗಿರುವ ರಸ್ತೆಗಳು ಮತ್ತು ಸೇತುವೆಗಳಲ್ಲಿ ವಾಹನಗಳ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸುವಂತೆ ಒಡಿಶಾದ ವಿಶೇಷ ಪರಿಹಾರ ಆಯುಕ್ತ ಸತ್ಯಬ್ರತ್ ಸಾಹು ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.