ADVERTISEMENT

ಭಾರಿ ಮಳೆಗೆ ತೇಲಿದ ಮುಂಬೈ: ರೈಲು ಸಂಚಾರ, ವಿಮಾನ ಹಾರಾಟಕ್ಕೆ ತೊಡಕು

ಮುಂಬೈನ ಕೆಲವೆಡೆ ಆರು ಗಂಟೆಗಳಲ್ಲಿ 30 ಸೆಂ.ಮೀ ಮಳೆ

ಪಿಟಿಐ
Published 8 ಜುಲೈ 2024, 14:33 IST
Last Updated 8 ಜುಲೈ 2024, 14:33 IST
ಮುಂಬೈನಲ್ಲಿ ರೈಲು ಹಳಿಗಳ ಮೇಲೆ ನೀರು ನಿಂತು, ಸಂಚಾರಕ್ಕೆ ಅಡಚಣೆಯಾಯಿತು –ಪಿಟಿಐ ಚಿತ್ರ
ಮುಂಬೈನಲ್ಲಿ ರೈಲು ಹಳಿಗಳ ಮೇಲೆ ನೀರು ನಿಂತು, ಸಂಚಾರಕ್ಕೆ ಅಡಚಣೆಯಾಯಿತು –ಪಿಟಿಐ ಚಿತ್ರ   

ಮುಂಬೈ: ಮುಂಬೈನ ಕೆಲವು ಪ್ರದೇಶಗಳಲ್ಲಿ ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ಬೆಳಿಗ್ಗೆ 7ರವರೆಗಿನ ಆರು ಗಂಟೆಗಳ ಅವಧಿಯಲ್ಲಿ 30 ಸೆಂ.ಮೀಗೂ ಹೆಚ್ಚು ಪ್ರಮಾಣದ ಮಳೆಯಾಗಿದೆ. ಇದರಿಂದಾಗಿ ಕೇಂದ್ರ ರೈಲ್ವೆ ವಿಭಾಗದ ಉಪನಗರ ರೈಲು ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿತ್ತು. ಹಳಿಗಳು ಮುಚ್ಚಿಹೋಗುವಷ್ಟು ನೀರು ನಿಂತಿತ್ತು. ಸುಮಾರು 50 ವಿಮಾನಗಳ ಹಾರಾಟ ರದ್ದಾಗಿತ್ತು.

ಕೇಂದ್ರ ರೈಲ್ವೆಯ ಪ್ರಮುಖ ಮಾರ್ಗ ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಲ್‌ ಅನ್ನು ಕೆಲವು ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಮುಂಬೈ ನಗರದ ಜೀವನಾಡಿಯಾಗಿರುವ ರೈಲ್ವೆ ಸಂಚಾರದಲ್ಲಿ ಕೂಡ ಅಡಚಣೆ ಉಂಟಾಗಿತ್ತು. 10 ನಿಮಿಷ ತಡವಾಗಿ ರೈಲುಗಳ ಸಂಚಾರವಾಗುತ್ತಿತ್ತು. ಇದರಿಂದ, ರೈಲು ನಿಲ್ದಾಣಗಳಲ್ಲಿ ಭಾರಿ ಜನರು ಜಮಾವಣೆಗೊಳ್ಳುವಂತೆ ಆಯಿತು.

‘ಹಳಿಗಳ ಮೇಲೆ ನೀರು ನಿಂತಿದ್ದ ಕಾರಣ, ರೈಲುಗಳ ಸಂಚಾರದಲ್ಲಿ ವ್ಯತ್ಯಯಗಳಾಗಿವೆ. ಹೆಚ್ಚು ಸಾಮರ್ಥ್ಯದ ಪಂಪ್‌ಗಳನ್ನು ಬಳಸಿಕೊಂಡು ಹಳಿಗಳ ಮೇಲೆ ಹರಿಯುತ್ತಿದ್ದ ನೀರನ್ನು ಖಾಲಿ ಮಾಡಲಾಯಿತು’ ಎಂದು ಪಶ್ಚಿಮ ರೈಲ್ವೆಯ ವಕ್ತಾರರು ತಿಳಿಸಿದ್ದಾರೆ.

ADVERTISEMENT

ಮುಂಬೈ ವಿಮಾನ ನಿಲ್ದಾಣದಲ್ಲಿ ರನ್‌ವೇ ಕಾರ್ಯಾಚರಣೆಯಲ್ಲಿ ತೊಡಕು ಉಂಟಾಗಿತ್ತು. ಇದರಿಂದ 50 ವಿಮಾನಗಳ ಸಂಚಾರವು ರದ್ದಾಗಿದೆ. ಅಹಮದಾಬಾದ್‌, ಹೈದರಾಬಾದ್, ಇಂದೋರ್‌ ಸೇರಿದಂತೆ ಹಲವು ನಗರಗಳಿಗೆ ಈ ವಿಮಾನಗಳ ಮಾರ್ಗ ಬದಲಾಯಿಸಲಾಯಿತು. ‘ಮುಂದಿನ 24 ಗಂಟೆಗಳಲ್ಲಿ ಮುಂಬೈನಲ್ಲಿ ಮಿತವಾದ ಹಾಗೂ ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದೆ’ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಹಾರಾಷ್ಟ್ರದಾದ್ಯಂತ ಮಳೆಯಾಗುತ್ತಿದೆ.

ಎರಡೂ ಸದನಗಳ ಕಲಾಪ ಮುಂದೂಡಿಕೆ: ಮಹಾರಾಷ್ಟ್ರದ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನ ಕಲಾಪವನ್ನು ಒಂದು ದಿನದ ಮಟ್ಟಿಗೆ ಸೋಮವಾರ ಮುಂದೂಡಲಾಯಿತು. ಸಚಿವಾಲಯದ ಸಿಬ್ಬಂದಿ, ಶಾಸಕರು, ಸಚಿವರು ಎಲ್ಲರೂ ಮಳೆಯಿಂದಾಗಿ ವಿಧಾನಸಭೆಗೆ ಹಾಜರಾಗಲು ಸಾಧ್ಯವಾಗದ ಕಾರಣ ಕಲಾಪವನ್ನು ಮುಂದೂಡಲಾಯಿತು.

ಬೆಳಿಗ್ಗೆ 11 ಗಂಟೆಗೆ ಕಲಾಪ ಆರಂಭಗೊಳ್ಳುತ್ತಿದ್ದಂತೆಯೇ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ್‌ ವಡೆಟ್ಟಾವರ್‌ ಅವರು, ‘ಕೋಟಿ ಕೋಟಿ ಹಣ ಸುರಿದರೂ ಮುಂಗಾರು ಪೂರ್ವ ಸಿದ್ಧತೆಗಳನ್ನು ಸರ್ಕಾರವು ಸರಿಯಾಗಿ ನಿರ್ವಹಿಸಿಲ್ಲ’ ಎಂದರು. ‘ನಾವೆಲ್ಲರೂ ಚುನಾವಣೆಯಲ್ಲಿ ತೊಡಗಿಕೊಂಡಿದ್ದೆವು. ಗುತ್ತಿಗೆದಾರರು ಮೋರಿಗಳ ಸ್ವಚ್ಛತೆ ಕೈಗೊಳ್ಳಬೇಕಿತ್ತು. ಮೋರಿಗಳಿಂದ ಎತ್ತಿದ ಕಸವನ್ನು ರಸ್ತೆ ಬದಿಯಲ್ಲಿಯೇ ಹಾಕಿದ್ದಾರೆ. ಮಳೆನೀರಿನಿಂದಾಗಿ ಆ ಕಸ ಮತ್ತೆ ಮೋರಿ ಸೇರಿದೆ’ ಎಂದು ಬಿಜೆಪಿಯ ಆಶಿಶ್‌ ಶೋಲಾರ್‌ ಹೇಳಿದರು.

ಹಳಿಗಳ ಮೇಲೆ ನೀರು ತುಂಬಿದ ದೃಶ್ಯವು ಮುಂಬೈನ ರೈಲು ನಿಲ್ದಾಣವೊಂದರಲ್ಲಿ ಕಂಡುಬಂದಿತು –ಪಿಟಿಐ ಚಿತ್ರ
ಮುಂಬೈನಲ್ಲಿ ಮಕ್ಕಳಿಬ್ಬರು ಮಳೆಯನ್ನು ಸಂಭ್ರಮಿಸಿದರು –ಎಎಫ್‌ಪಿ ಚಿತ್ರ
ಮುಂಬೈ ನಗರದಲ್ಲಿ ರಸ್ತೆಗಳ ಮೇಲೆ ನೀರು ನಿಂತಿದ್ದರಿಂದ ವಾಹನ ಸವಾರರಿಗೆ ತೊಂದರೆಯಾಯಿತು –ಪಿಟಿಐ ಚಿತ್ರ
ಅಸ್ಸಾಂನ ಕಛಾರ್‌ ಜಿಲ್ಲೆಯ ಫುಲರತಾಲ್‌ನಲ್ಲಿರುವ ನಿರಾಶ್ರಿತ ಶಿಬಿರದಲ್ಲಿ ಆಶ್ರಯ ಪಡೆದಿರುವವರನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಸೋಮವಾರ ಭೇಟಿ ಮಾಡಿದರು –ಪಿಟಿಐ ಚಿತ್ರ

ಮಳೆಯಲ್ಲಿ ಸಿಲುಕಿದ ವಿಪತ್ತು ನಿರ್ವಹಣಾ ಸಚಿವ

ಕಲಾಪದಲ್ಲಿ ಭಾಗಿಯಾಗಲು ಪರಿಹಾರ ಹಾಗೂ ಪುನರ್‌ವಸತಿ ಮತ್ತು ವಿಪತ್ತು ನಿರ್ವಹಣಾ ಸಚಿವ ಅನಿಲ್‌ ಪಾಟಿಲ್‌ ಹಾಗೂ ಎನ್‌ಸಿಪಿ ಶಾಸಕ ಅಮೋಲ್‌ ಮಿಟ್ಕರಿ ಅವರು ಹೌರಾ–ಮುಂಬೈ ರೈಲಿನಲ್ಲಿ ಬರುತ್ತಿದ್ದರು. ಹಳಿ ಮೇಲೆ ನೀರು ನಿಂತ ಕಾರಣ ಸುಮಾರು 2 ಗಂಟೆಗಳವರೆಗೆ ರೈಲು ನಿಂತೇ ಇತ್ತು. ಈ ವೇಳೆ ಇಬ್ಬರೂ ರೈಲಿನಿಂದ ಇಳಿದು ಎರಡೂವರೆ ಕೀ.ಮೀ ನಡೆದು ಹತ್ತಿರದ ಪೊಲೀಸ್‌ ಠಾಣೆಗೆ ತಲುಪಿದರು. ಸಚಿವ ಹಾಗೂ ಶಾಸಕ ಹಳಿಗಳ ಮೇಲೆ ನಡೆದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದೇ ರೈಲಿನಲ್ಲಿ ಹಲವು ಶಾಸಕರೂ ಇದ್ದರು ಎನ್ನಲಾಗಿದೆ. * ಜಲಾವೃತಗೊಂಡ ಮುಂಬೈನ ತಗ್ಗು ಪ್ರದೇಶಗಳು * ಠಾಣೆ ಜಿಲ್ಲೆಯಲ್ಲಿ ಸೇತುವೆಯೊಂದು ಕೊಚ್ಚಿ ಹೋಗಿದೆ. ಇದರಿಂದ 275 ಮನೆಗಳಿಗೆ ಹಾನಿಯಾಗಿದ್ದು 54 ಜನರನ್ನು ರಕ್ಷಿಸಲಾಗಿದೆ * ಮುಂಬೈ ರತ್ನಗಿರಿ ಹಾಗೂ ಸಿಂಧುದುರ್ಗ ಜಿಲ್ಲೆಗಳಲ್ಲಿ ಶಾಲಾ–ಕಾಲೇಜುಗಳಿಗೆ ರಜೆ ಘೋಷಣೆ * ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಮಳೆ ಪರಿಸ್ಥಿತಿ ಬಗ್ಗೆ ತಮ್ಮ ಕಾರ್ಯಾಲಯದಲ್ಲಿ ಸಭೆ ನಡೆಸಿದರು. ಬಿಎಂಸಿ ಕಚೇರಿಗೂ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿದರು

Cut-off box - ಬಿಹಾರದಲ್ಲಿ ಮಿಂಚು: 12 ಸಾವು ಪಟ್ನಾ: ಬಿಹಾರದ ಏಳು ಜಿಲ್ಲೆಗಳಲ್ಲಿ ಸಿಡಿಲಿನಿಂದಾಗಿ 12 ಮಂದಿ ಮೃತಪಟ್ಟಿದ್ದಾರೆ. ಕಳೆದ 10 ದಿನಗಳಲ್ಲಿ ವಿವಿಧ ಜಿಲ್ಲೆಗಳಲ್ಲಿ ಸಿಡಿಲಿನಿಂದ 40 ಜನರು ಮೃತಪಟ್ಟಿದ್ದರೆ ಕಳೆದ ಎರಡು ದಿನಗಳಲ್ಲೇ 22 ಮಂದಿ ಸಾವಿಗೀಡಾಗಿದ್ದಾರೆ. ಘಟನೆ ಕುರಿತು ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಮೃತರ ಕುಟುಂಬಗಳಿಗೆ ₹4 ಲಕ್ಷ ಪರಿಹಾರ ಘೋಷಿಸಿದ್ದಾರೆ. ಮನೆಯಿಂದ ಹೊರಬರದಂತೆಯೂ ಮುಖ್ಯಮಂತ್ರಿ ಜನರಲ್ಲಿ ಮನವಿ ಮಾಡಿದ್ದಾರೆ.

‘ಅಸ್ಸಾಂ: ಸಂಸತ್ತಿನಲ್ಲಿ ನಾನು ನಿಮ್ಮ ಸೈನಿಕನಾಗುವೆ’

ಗುವಾಹಟಿ/ಸಿಲ್‌ಚರ್‌: ಅಸ್ಸಾಂನಲ್ಲಿ ಪ್ರವಾಹ ಸ್ಥಿತಿಯು ಮುಂದುವರಿದಿದ್ದು 28 ಜಿಲ್ಲೆಗಳ ಸುಮಾರು 23 ಲಕ್ಷ ಜನರು ಬಾಧಿತರಾಗಿದ್ದಾರೆ. ಪ್ರಮುಖ ನದಿಗಳು ಅಪಾಯಕಾರಿ ಮಟ್ಟವನ್ನು ಮೀರಿ ಹರಿಯುತ್ತಿವೆ. ಈ ಮಧ್ಯೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಸೋಮವಾರ ಅಸ್ಸಾಂನ ಕಛಾರ್‌ ಜಿಲ್ಲೆಯ ಫುಲರತಾಲ್‌ನಲ್ಲಿರುವ ನಿರಾಶ್ರಿತರ ಶಿಬಿರವೊಂದಕ್ಕೆ ಭೇಟಿ ನೀಡಿದ್ದಾರೆ.

‘ನಾನು ಅಸ್ಸಾಂ ಜನರ ಪರವಾಗಿ ‘ಸಂಸತ್ತಿನಲ್ಲಿ ನಿಮ್ಮ ಸೈನಿಕನಂತೆ’ ಇರಲಿದ್ದೇನೆ. ಕೇಂದ್ರ ಸರ್ಕಾರವು ತ್ವರಿತವಾಗಿ ಸಾಧ್ಯವಿರುವ ಸಹಾಯವನ್ನು ಅಸ್ಸಾಂಗಾಗಿ ಮಾಡಬೇಕು’ ಎಂದು ರಾಹುಲ್‌ ಅವರು ‘ಎಕ್ಸ್‌’ನಲ್ಲಿ ಬರೆದುಕೊಂಡಿದ್ದಾರೆ. ಲೋಕಸಭೆಯಲ್ಲಿ ಇಲ್ಲಿನ ಪ್ರವಾಹದ ಕುರಿತು ಮಾತನಾಡುವಂತೆ ರಾಹುಲ್‌ ಅವರನ್ನು  ಅಸ್ಸಾಂ ಕಾಂಗ್ರೆಸ್‌ ಮನವಿ ಮಾಡಿಕೊಂಡಿತು.

‘ಅಸ್ಸಾಂ ಪ್ರವಾಹ ಸ್ಥಿತಿಗೆ ಸಂಬಂಧಿಸಿದಂತೆ ತಕ್ಷಣದ ಮತ್ತು ದೀರ್ಘಾವಧಿಯ ಪರಿಹಾರ ಯೋಜನೆಯೊಂದು ಬೇಕಿದೆ. ಅದು ಸಮಗ್ರವಾದ ಹಾಗೂ ಸಹಾನುಭೂತಿಯಿಂದ ಕೂಡಿರಬೇಕಿದೆ. ಪುನರ್‌ವಸತಿ ಹಾಗೂ ಪರಿಹಾರ ಸಂಬಂಧ ರಾಜ್ಯಕ್ಕೆ ತಕ್ಷಣದಲ್ಲಿ ಯೋಜನೆಯೊಂದು ಬೇಕಿದೆ. ಪ್ರತೀ ಬಾರಿಯು ತಲೆದೋರುವ ಪ್ರವಾಹಕ್ಕೆ ಸಂಬಂಧಿಸಿದಂತೆ ಇಡೀ ಈಶಾನ್ಯ ರಾಜ್ಯಗಳನ್ನು ಒಳಗೊಳ್ಳುವ ಜಲ ನಿರ್ವಹಣಾ ಪ್ರಾಧಿಕಾರ ಸ್ಥಾಪನೆಯು ದೀರ್ಘಾವಧಿಯ ಕಾರ್ಯಯೋಜನೆಯಾಗಬೇಕು’ ಎಂದರು.

ಪ್ರವಾಹ ಮುಕ್ತ ಅಸ್ಸಾಂ ರೂಪಿಸುವುದಾಗಿ ಬಿಜೆಪಿಯು ಮಾತು ಕೊಟ್ಟು ಅಧಿಕಾರಕ್ಕೆ ಏರಿತ್ತು. ರಾಜ್ಯದ ಈಗಿನ ಸ್ಥಿತಿಯು ಡಬಲ್‌ ಎಂಜಿನ್‌ ಸರ್ಕಾರದ ಕೆಟ್ಟ ನಿರ್ವಹಣೆಯನ್ನು ಸೂಚಿಸುತ್ತಿದೆ
- ರಾಹುಲ್‌ ಗಾಂಧಿ ಲೋಕಸಭೆಯ ವಿರೋಧ ಪಕ್ಷದ ನಾಯಕ
ಪ್ರವಾಹ ಸಂಬಂಧಿತ ಪರಿಹಾರ ಪುನರ್‌ವಸತಿಗಾಗಿ ಐದು ವರ್ಷಗಳಲ್ಲಿ ₹10785 ಕೋಟಿ ನೀಡುವಂತೆ ಕೇಂದ್ರಕ್ಕೆ ಅಸ್ಸಾಂ ಸರ್ಕಾರ ಮನವಿ ಮಾಡಿದೆ. ಆದರೆ ಬಂದಿದ್ದು ಮಾತ್ರ ₹250 ಕೋಟಿ
-ಭುಪೆನ್‌ ಬೋರಾ ಅಸ್ಸಾಂನ ಕಾಂಗ್ರೆಸ್‌ ಘಟಕದ ಅಧ್ಯಕ್ಷ

–––

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.