ಮುಂಬೈ(ಮಹಾರಾಷ್ಟ್ರ): ಭಾರಿ ಮಳೆ ಹಿನ್ನೆಲೆ ಮುಂಬೈನಲ್ಲಿ ಕೇಂದ್ರ ರೈಲ್ವೆ ಮಾರ್ಗಗಳಲ್ಲಿ ಸ್ಥಳೀಯ ರೈಲು ಸೇವೆ ಹಾಗೂ ವಿಮಾನ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರಿ ಮಳೆ ಹಿನ್ನೆಲೆಯಲ್ಲಿ ನಗರದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ದಕ್ಷಿಣ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ಮತ್ತು ಥಾಣೆ ನಡುವಿನ ಮುಖ್ಯ ಕಾರಿಡಾರ್‌ನ ಮಾರ್ಗ ಜಲಾವೃತವಾಗಿರುವ ಕಾರಣ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೇಂದ್ರ ರೈಲ್ವೆಯ (CR) ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸ್ವಪ್ನಿಲ್ ನಿಲಾ ತಿಳಿಸಿದ್ದಾರೆ.
ಚುನ್ನಭಟಿಯಲ್ಲಿ ನೀರು ನಿಂತಿದ್ದರಿಂದ ಹಾರ್ಬರ್ ಕಾರಿಡಾರ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಉಪನಗರ ರೈಲು ಸೇವೆಗೆ ಅಡಚಣೆ ಉಂಟಾಗಿದೆ. ಇದರಿಂದ ಕೆಲವು ಪ್ರಮುಖ ನಿಲ್ದಾಣಗಳಲ್ಲಿ ಮತ್ತು ರೈಲುಗಳಲ್ಲಿ ನೂಕುನುಗ್ಗಲು ಉಂಟಾಗಿದೆ.
ಭಾರಿ ಮಳೆಯಿಂದಾಗಿ ಮಾಟುಂಗಾ ರಸ್ತೆ ಮತ್ತು ದಾದರ್ ನಡುವಿನ ಹಳಿಗಳ ಮೇಲೆ ನೀರು ನಿಂತಿದೆ. ಇದರಿಂದ ಉಪನಗರ ರೈಲುಗಳ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಪಶ್ಚಿಮ ರೈಲ್ವೆ ವಕ್ತಾರರು ಹೇಳಿದ್ದಾರೆ.
ಭಾರಿ ಮಳೆ ಮತ್ತು ಕಡಿಮೆ ಗೋಚರತೆ ಕಾರಣದಿಂದ ಮುಂಬೈ ವಿಮಾನ ನಿಲ್ದಾಣದಲ್ಲಿ ಸೋಮವಾರ ಮುಂಜಾನೆ 2.22 ರಿಂದ 3.40 ರವರೆಗೆ ರನ್‌ವೇ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. 27 ವಿಮಾನಗಳನ್ನು ಅಹಮದಾಬಾದ್, ಹೈದರಾಬಾದ್, ಇಂದೋರ್ ಸೇರಿದಂತೆ ಬೇರೆಡೆಗೆ ತಿರುಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.