ADVERTISEMENT

ಥಾಣೆಯಲ್ಲಿ ಭಾರಿ ಮಳೆ | ಹಲವು ಮನೆಗಳು ಜಲಾವೃತ: 54 ಜನರ ರಕ್ಷಣೆ

ಪಿಟಿಐ
Published 8 ಜುಲೈ 2024, 4:45 IST
Last Updated 8 ಜುಲೈ 2024, 4:45 IST
   

ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಭಾರಿ ಮಳೆಯಾಗಿದ್ದು, ಹಲವು ಮನೆಗಳು ಜಲಾವೃತಗೊಂಡಿವೆ. ಜಲಾವೃತಗೊಂಡ ಮನೆಯಲ್ಲಿದ್ದ 54 ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಭಾನುವಾರ ಸುರಿದ ಭಾರಿ ಮಳೆಗೆ ವಿವಿಧ ಪ್ರದೇಶಗಳಲ್ಲಿ ಕನಿಷ್ಠ 275 ಮನೆಗಳು ಹಾನಿಗೊಳಗಾಗಿವೆ. ಸುಮಾರು 20 ವಾಹನಗಳು ನೀರಿನಲ್ಲಿ ಮುಳುಗಿವೆ. ಸೇತುವೆಯೊಂದು ಕೊಚ್ಚಿಹೋಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

'ಥಾಣೆ ಜಿಲ್ಲೆಯಲ್ಲಿ ಭಾನುವಾರ 6.5 ಸೆಂ.ಮೀ ಮಳೆಯಾಗಿದೆ. ಸೋಮವಾರ ಬೆಳಗ್ಗೆ 6.30ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಥಾಣೆ ನಗರದಲ್ಲಿ 12.08 ಸೆಂ.ಮೀ ಮಳೆ ದಾಖಲಾಗಿದೆ' ಎಂದು ಸ್ಥಳೀಯ ನಾಗರಿಕ ಸಂಸ್ಥೆಯ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥ ಯಾಸಿನ್ ತದ್ವಿ ತಿಳಿಸಿದ್ದಾರೆ.

ADVERTISEMENT

'ಸೋಮವಾರ ಬೆಳಗಿನ ಜಾವ 3.30ರಿಂದ 4.30ರ ನಡುವಿನ ಕೇವಲ ಒಂದು ಗಂಟೆಯಲ್ಲಿ ನಗರದಲ್ಲಿ 4.6 ಸೆಂ.ಮೀ ಮಳೆಯಾಗಿದೆ. ನಗರದಲ್ಲಿ ಜೂನ್ 1 ರಿಂದ ಇದುವರೆಗೆ 85.88 ಸೆಂ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 91.79 ಸೆಂ.ಮೀ ಮಳೆಯಾಗಿತ್ತು' ಎಂದು ಅವರು ಮಾಹಿತಿ ನೀಡಿದ್ದಾರೆ.

ಥಾಣೆ ಜಿಲ್ಲೆಯ ಶಹಾಪುರ ತಾಲೂಕು ಅಸಂಗಾವ್-ಮಾಹುರಿ ರಸ್ತೆಯ ಸೇತುವೆ ಕೊಚ್ಚಿಹೋಗಿದೆ. ಗುಜರಾತಿ ಬಾಗ್ ಪ್ರದೇಶದ ಬಾರಂಗಿ ನದಿಯಲ್ಲಿ ಪ್ರವಾಹ ಉಂಟಾಗಿದ್ದು, ಈ ಪ್ರದೇಶ ಸುಮಾರು 70 ಮನೆಗಳಿಗೆ ನೀರು ನುಗ್ಗಿದೆ. ವಿವಿಧ ಗೃಹೋಪಯೋಗಿ ವಸ್ತುಗಳು ಹಾನಿಗೊಳಗಾಗಿದ್ದು, 20 ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳು ಕೊಚ್ಚಿಹೋಗಿವೆ ಎಂದು ವರದಿಯಾಗಿದೆ.

'ಶಹಾಪುರದ ಗೋತೇಘರ್ ಪ್ರದೇಶದ ವಾಫಾ ನರ್ಸರಿ ಪ್ರದೇಶಕ್ಕೆ ನೀರು ನುಗ್ಗಿದ್ದು, 3 ಮನೆಗಳಲ್ಲಿದ್ದ 38 ಮಂದಿಯನ್ನು ರಕ್ಷಿಸಲಾಗಿದೆ. ವಶಿಂದ್ ಪ್ರದೇಶದಲ್ಲಿ 125 ಮನೆಗಳು ಜಲಾವೃತಗೊಂಡಿದ್ದು, ಇಲ್ಲಿಂದ 12 ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಭಾರಿ ಮಳೆಯಿಂದಾಗಿ ಅಟ್ಗಾಂವ್‌ನಲ್ಲಿ ರೈಲ್ವೆ ಹಳಿಗಳ ಪಕ್ಕದಲ್ಲಿ ಮಣ್ಣು ಕೊಚ್ಚಿಕೊಂಡು ಹೋಗಿದೆ . ಶಹಾಪುರದಲ್ಲಿ ಸುಮಾರು 12 ಮನೆಗಳು ಭಾಗಶಃ ಕುಸಿದಿವೆ' ಎಂದು ಅವರು ತಿಳಿಸಿದ್ದಾರೆ.

'ಕಲ್ಯಾಣ ತಾಲೂಕಿನ ಖಡವಲಿಯಲ್ಲಿ 5 ಮತ್ತು ವಾವೇಘರ್‌ನಲ್ಲಿ 3 ಮನೆಗಳು ಜಲಾವೃತಗೊಂಡಿವೆ. ಭಿವಂಡಿ ತಾಲೂಕಿನಲ್ಲಿ ಸುಮಾರು 40 ಮನೆಗಳಿಗೆ ನೀರು ನುಗ್ಗಿದೆ. ಗೌಟೆಪಾಡಾದಲ್ಲಿ ಒಂದು ಮನೆಗೆ ಹಾನಿಯಾಗಿದೆ. ಯಾವುದೇ ಜೀವಹಾನಿಯಾದ ಬಗ್ಗೆ ವರದಿಯಾಗಿಲ್ಲ. ಮಳೆ ಮತ್ತು ಪ್ರವಾಹ ಹಾನಿ ಬಗ್ಗೆ ವರದಿ ಮಾಡಲು ಸ್ಥಳೀಯ ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಗಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.