ಚೆನ್ನೈ: ಬಿಟ್ಟೂಬಿಡದೆ ಸುರಿದ ಮಳೆಯು, ಚೆನ್ನೈ ನಗರವನ್ನು ಮಂಗಳವಾರ ತನ್ನೆದುರು ಮಂಡಿಯೂರುವಂತೆ ಮಾಡಿತು. ನಗರದ ಹಲವು ತಗ್ಗು ಪ್ರದೇಶಗಳು ಮಳೆ ನೀರಿನಿಂದ ಜಲಾವೃತವಾಗಿವೆ. ನಗರ ಉತ್ತರ ಭಾಗದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.
ಅ.14ರ ಸಂಜೆ 6 ಗಂಟೆಯಿಂದ ಅ.15ರ ಸಂಜೆ 6 ಗಂಟೆಯವರೆಗೆ ಚೆನ್ನೈನಲ್ಲಿ ಸುಮಾರು 10 ಸೆ.ಮೀನಷ್ಟು ಮಳೆ ಸುರಿದಿದೆ. ಹಲವು ಪ್ರದೇಶಗಳಲ್ಲಿ ಮಳೆಯ ಪ್ರಮಾಣವು 15
ಸೆ.ಮೀನಷ್ಟಿತ್ತು.
ನಗರ ಹಲವು ಮುಖ್ಯ ರಸ್ತೆಗಳು ಜಲಾವೃತಗೊಂಡಿದ್ದವು. ಆದರೂ ಸಂಚಾರಕ್ಕೆ ಹೆಚ್ಚಿನ ಅಡಚಣೆಯಾಗಲಿಲ್ಲ. ಅಕ್ಟೋಬರ್‌ನಲ್ಲಿ ಪ್ರತಿವರ್ಷ ಸುರಿಯುವ ಮಳೆಗೆ ಚೆನ್ನೈನ ಉತ್ತರ ಭಾಗದ ವೆಲಚೇರಿ ಮತ್ತು ಪಾಲಿಕರಣೈ ಪ್ರದೇಶಗಳ ಜನರು ತೀವ್ರ ಸಂಕಷ್ಟ ಎದುರಿಸುತ್ತಾರೆ. ಮಂಗಳವಾರ ಸುರಿದ ಮಳೆಯೂ ಈ ಪ್ರದೇಶಗಳ ಮೇಲೆ ತೀವ್ರ ಪರಿಣಾಮ ಬೀರಿದೆ.
ವಾಯುಭಾರ ಕುಸಿತ: ಬಂಗಾಳ ಕೊಲ್ಲಿಯಲ್ಲಿ ಮಂಗಳವಾರ ಉಂಟಾದ ವಾಯುಭಾರ ಕುಸಿತದ ಪರಿಣಾಮವಾಗಿ ತಮಿಳುನಾಡಿನಲ್ಲಿ ತೀವ್ರ ಮಳೆಯಾಗಿದೆ. ಆಂಧ್ರ ಪ್ರದೇಶದ ಹಲವು ಭಾಗಗಳಲ್ಲಿ ಹಾಗೂ ಪುದುಚೆರಿಯಲ್ಲಿಯೂ ತೀವ್ರ ಮಳೆಯಾಗಿದೆ. ‘ವಾಯುಭಾರ ಕುಸಿತವು ಇನ್ನಷ್ಟು ತೀವ್ರಗೊಳ್ಳಲಿದ್ದು, ಇನ್ನೆರಡು ದಿನಗಳಲ್ಲಿ ತಮಿಳುನಾಡು, ಆಂಧ್ರ ಪ್ರದೇಶದ ದಕ್ಷಿಣ ಭಾಗಗಳಲ್ಲಿ ಹಾಗೂ ಪುದುಚೆರಿಯಲ್ಲಿ ತೀವ್ರ ಮಳೆಯಾಗಲಿದೆ’ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ದೇಶದಲ್ಲಿ ನೈರುತ್ಯ ಮುಂಗಾರು ಮುಕ್ತಾಯಗೊಂಡಿದ್ದು ಈಶಾನ್ಯ ಮಾನ್ಸೂನ್ ಮಾರುತವು ತನ್ನ ಕಾರ್ಯಚಟುವಟಿಕೆಯನ್ನು ಆರಂಭಿಸಿದೆ
ಭಾರತೀಯ ಹವಾಮಾನ ಇಲಾಖೆಯು ಚೆನ್ನೈ ತಿರುವೆಳ್ಳೂರು ಕಾಂಚೀಪುರ ಹಾಗೂ ಚಂಗ್ಲಪಟ್ಟು ಜಿಲ್ಲೆಗಳಲ್ಲಿ ’ರೆಡ್ ಅಲರ್ಟ್‘ ಘೋಷಿಸಿದ್ದು ಈ ಪ್ರದೇಶಗಳ ಶಾಲಾ–ಕಾಲೇಜು ಸರ್ಕಾರ ಹಾಗೂ ಖಾಸಗಿ ಕಚೇರಿಗಳಿಗೆ ಬುಧವಾರ ರಜೆ ಘೋಷಿಸಲಾಗಿದೆ
ಚೆನ್ನೈನ ಹಲವು ಭಾಗಗಳಲ್ಲಿ ಬಸ್ ಸಂಚಾರ ವ್ಯತ್ಯಯವಾಗಿದ್ದವು. ಚೆನ್ನೈ–ಮೈಸೂರು ಕಾವೇರಿ ಎಕ್ಸ್‌ಪ್ರೆಸ್ ಸೇರಿದಂತೆ ನಾಲ್ಕು ರೈಲು ಸಂಚಾರವನ್ನು ರದ್ದು ಮಾಡಲಾಗಿತ್ತು. ಹಲವು ದೇಶೀಯ ಮಾರ್ಗಗಳ ವಿಮಾನಗಳ ಹಾರಾಟವೂ ರದ್ದುಗೊಂಡಿತ್ತು. ಮೆಟ್ರೊ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿಲ್ಲ
ಚೆನ್ನೈನ ಉತ್ತರ ಭಾಗದಲ್ಲಿ 40 ಕಿ.ಮೀನಿಂದ 50 ಕಿ.ಮೀ ವೇಗದಲ್ಲಿ ದಿಢೀರ್ ಗಾಳಿ ಬೀಸಲಿದ್ದು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಪ್ರವಾಹ ಪೀಡಿತ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿದರು. ಚೆನ್ನೈ ಕಾರ್ಪೊರೇಷನ್‌ನ ನಿಯಂತ್ರಣ ಕೊಠಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
ವಾಯುಭಾರ ಕುಸಿತ
ಬಂಗಾಳ ಕೊಲ್ಲಿಯಲ್ಲಿ ಮಂಗಳವಾರ ಉಂಟಾದ ವಾಯುಭಾರ ಕುಸಿತದ ಪರಿಣಾಮವಾಗಿ ತಮಿಳುನಾಡಿನಲ್ಲಿ ತೀವ್ರ ಮಳೆಯಾಗಿದೆ. ಆಂಧ್ರ ಪ್ರದೇಶದ ಹಲವು ಭಾಗಗಳಲ್ಲಿ ಹಾಗೂ ಪುದುಚೆರಿಯಲ್ಲಿಯೂ ತೀವ್ರ ಮಳೆಯಾಗಿದೆ. ‘ವಾಯುಭಾರ ಕುಸಿತವು ಇನ್ನಷ್ಟು ತೀವ್ರಗೊಳ್ಳಲಿದ್ದು ಇನ್ನೆರಡು ದಿನಗಳಲ್ಲಿ ತಮಿಳುನಾಡು ಆಂಧ್ರ ಪ್ರದೇಶದ ದಕ್ಷಿಣ ಭಾಗಗಳಲ್ಲಿ ಹಾಗೂ ಪುದುಚೆರಿಯಲ್ಲಿ ತೀವ್ರ ಮಳೆಯಾಗಲಿದೆ’ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.