ADVERTISEMENT

ಕಾವಡ್‌ ಯಾತ್ರಾರ್ಥಿಗೆ ಗುದ್ದಿದ ಕಾರು: ಭದ್ರತೆ ಹೆಚ್ಚಳ

ಪಿಟಿಐ
Published 28 ಜುಲೈ 2024, 15:36 IST
Last Updated 28 ಜುಲೈ 2024, 15:36 IST
ಶ್ರಾವಣಮಾಸದಲ್ಲಿ ಗಂಗಾ ನದಿಯಿಂದ ಪವಿತ್ರ ನೀರು ಸಂಗ್ರಹಿಸಲು ಕಾವಡ್‌ ಯಾತ್ರಾರ್ಥಿಗಳು ಭಾನುವಾರ ಹರಿದ್ವಾರದ ಹರ್‌ ಕಿ ಪೌಡಿ ಘಾಟ್‌ನಲ್ಲಿ ಸೇರಿದ್ದರು– ಪ್ರಜಾವಾಣಿ ಚಿತ್ರ
ಶ್ರಾವಣಮಾಸದಲ್ಲಿ ಗಂಗಾ ನದಿಯಿಂದ ಪವಿತ್ರ ನೀರು ಸಂಗ್ರಹಿಸಲು ಕಾವಡ್‌ ಯಾತ್ರಾರ್ಥಿಗಳು ಭಾನುವಾರ ಹರಿದ್ವಾರದ ಹರ್‌ ಕಿ ಪೌಡಿ ಘಾಟ್‌ನಲ್ಲಿ ಸೇರಿದ್ದರು– ಪ್ರಜಾವಾಣಿ ಚಿತ್ರ   

ಗಾಜಿಯಾಬಾದ್‌: ಜಿಲ್ಲೆಯ ಮುರಾದ್‌ ನಗರದಲ್ಲಿ ‘ಕಾವಡ್‌ ಯಾತ್ರೆ’ಗೆ ತೆರಳುತ್ತಿದ್ದ ಯಾತ್ರಾರ್ಥಿಗಳಿಗೆ ಕಾರು ಡಿಕ್ಕಿ ಹೊಡೆದ ಬಳಿಕ ಗಾಜಿಯಾಬಾದ್‌ನ ವಿವಿಧೆಡೆ ಭದ್ರತೆ ಹೆಚ್ಚಿಸಲಾಗಿದ್ದು, ಹಲವೆಡೆ ಸಂಚಾರ ನಿರ್ಬಂಧ ವಿಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದರು.

ಅಪಘಾತದ ಬಳಿಕ ಯಾತ್ರಾರ್ಥಿಗಳು ದೆಹಲಿ– ಮೀರತ್‌ ಎಕ್ಸ್‌ಪ್ರೆಸ್‌ವೇ ತಡೆದು, ಗಲಾಟೆ ನಡೆಸಿದರು. ಇದರಿಂದ ಈ ಮಾರ್ಗದಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದರು. 

‘ರಾವಲಿ ರಸ್ತೆಯ ಪಕ್ಕದಲ್ಲಿರುವ ಮುರಾದ್‌ ನಗರ ಪಟ್ಟಣದ ಗಂಗಾ ಕಾಲುವೆ ಸೇತುವೆಯಲ್ಲಿ ಪ್ರಾಂತೀಯ ಸಶಸ್ತ್ರ ಪಡೆಯ (ಪಿಎಸಿ)ಯ ಎರಡು ತುಕಡಿ ನಿಯೋಜಿಸಲಾಗಿದ್ದು, ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ’ ಎಂದು ಗಾಜಿಯಾಬಾದ್‌ ನಗರ ಪೊಲೀಸ್‌ ಆಯುಕ್ತ ಅಜಯ್‌ ಕುಮಾರ್‌ ಮಿಶ್ರಾ ತಿಳಿಸಿದರು.

ADVERTISEMENT

ಮುರಾದ್‌ ನಗರದ ರಾವಲಿ ರಸ್ತೆಯ ಬಳಿ ಶನಿವಾರ ಕಾವಡ್‌ ಯಾತ್ರಾರ್ಥಿಗಳ ಮೇಲೆ ಕಾರು ಡಿಕ್ಕಿ ಹೊಡೆದು, ಒಬ್ಬರು ಗಾಯಗೊಂಡಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ಯಾತ್ರಾರ್ಥಿಗಳು ಕಾರನ್ನು ಜಖಂಗೊಳಿಸಿ, ಚಾಲಕನ ಮೇಲೆ ಹಲ್ಲೆ ನಡೆಸಿದ್ದರು. 

‘ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಗಾಜಿಯಾಬಾದ್‌ ಜಿಲ್ಲಾ ವ್ಯಾಪ್ತಿಯಲ್ಲಿ ಜುಲೈ 29ರಿಂದ ಆಗಸ್ಟ್‌ 2ರವರೆಗೆ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ಸೂಚಿಸಲಾಗಿದ್ದು, ಶಾಲಾ ಬಸ್‌ಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ’ ಎಂದು ಮಿಶ್ರಾ ತಿಳಿಸಿದರು.

ಶ್ರಾವಣ ಮಾಸದಲ್ಲಿ ಗಂಗೆಯ ಪವಿತ್ರ ನೀರು ಸಂಗ್ರಹಿಸಿ ಶಿವನಿಗೆ ಅರ್ಪಿಸಲು ಕಾವಡ್‌ ಯಾತ್ರಾರ್ಥಿಗಳು ಜೈಪುರದಲ್ಲಿ ಭಾನುವಾರ ತೆರಳಿದರು– ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.