ರುದ್ರಪ್ರಯಾಗ: ಭಾರತೀಯ ವಾಯುಪಡೆಯ ಎಂಐ-17 ಹೆಲಿಕಾಪ್ಟರ್‌ವೊಂದನ್ನು ದುರಸ್ತಿಗಾಗಿ ಶನಿವಾರ ಬೆಳಿಗ್ಗೆ ಗೌಚಾರ್‌ಗೆ ತರುತ್ತಿದ್ದ ವೇಳೆ, ತಾಂತ್ರಿಕ ಸಮಸ್ಯೆಯ ಕಾರಣದಿಂದಾಗಿ ಕೇದಾರನಾಥ ಬಳಿಯ ಬೆಟ್ಟದಲ್ಲಿ ಕೆಳಕ್ಕೆ ಬೀಳಿಸಲಾಗಿದೆ.
ಕೆಳಗೆ ಬಿದ್ದ ಹೆಲಿಕಾಪ್ಟರ್‌ನಲ್ಲಿ ಯಾವುದೇ ಪ್ರಯಾಣಿಕರು ಅಥವಾ ಲಗೇಜ್ ಇರಲಿಲ್ಲ ಎಂದು ರುದ್ರಪ್ರಯಾಗದ ಜಿಲ್ಲಾ ಪ್ರವಾಸೋದ್ಯಮ ಅಧಿಕಾರಿ ರಾಹುಲ್ ಚೌಬೆ ತಿಳಿಸಿದ್ದಾರೆ.
ಕ್ರಿಸ್ಟಲ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್‌ಗೆ ಈ ಹೆಲಿಕಾಪ್ಟರ್ ಸೇರಿದ್ದು, ತಾಂತ್ರಿಕ ದೋಷದಿಂದ ಮೇ 24ರಂದು ಕೇದಾರನಾಥದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ದುರಸ್ತಿಗಾಗಿ ತರುವ ವೇಳೆ ತೊಂದರೆ ಉಂಟಾಗಿದ್ದು, ಇದನ್ನು ಗ್ರಹಿಸಿದ ಎಂಐ-17ನ ಪೈಲಟ್ ಅವರು ಹೆಲಿಕಾಪ್ಟರ್ ಅನ್ನು ನಿರ್ಜನ ಪ್ರದೇಶದಲ್ಲಿ ಕೆಳಗೆ ಬೀಳಿಸಿದ್ದಾರೆ ಎಂದು ಚೌಬೆ ಹೇಳಿದ್ದಾರೆ.
ಮಾಹಿತಿ ಪಡೆದ ತಕ್ಷಣ ರಕ್ಷಣಾ ತಂಡ ಸ್ಥಳಕ್ಕೆ ಆಗಮಿಸಿದೆ. ತಂಡವು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.