ಜೈಪುರ: ರಾಜಸ್ಥಾನಕ್ಕೆ ಬರುವ ಪ್ರವಾಸಿಗರು ಹೆಲಿಕಾಪ್ಟರ್ ಮೂಲಕ ವೈಮಾನಿಕ ನೋಟವನ್ನು ಆನಂದಿಸಬಹುದು ಎಂದು ರಾಜಸ್ಥಾನ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಆರ್‌ಟಿಡಿಸಿ) ತಿಳಿಸಿದೆ.
ಇಲ್ಲಿನ ವಿವಿಧ ಪ್ರವಾಸಿ ತಾಣಗಳಾದ ಅರಾವಲಿ ಅರಣ್ಯಗಳು, ಅಮೇರ್ ಫೋರ್ಟ್, ನಹರ್ಗಢ್, ಜೈಘರ್, ಜಲ್ಮಹಲ್, ಹವಾ ಮಹಲ್ ಅನ್ನು ಹೆಲಿಕಾಪ್ಟರ್ ಮೂಲಕ ವೀಕ್ಷಿಸಿಬಹುದು.
ಈ ಜಾಯ್ ರೈಡ್‌ಗೆ ₹5000 ರಿಂದ ₹7000 ವೆಚ್ಚ ಆಗಲಿದೆ.
ಈ ಸೌಲಭ್ಯವು ಜೋಧ್‌ಪುರ ಮತ್ತು ಉದಯಪುರ ಸೇರಿದಂತೆ ರಾಜ್ಯದ ಇತರ ನಗರಗಳಲ್ಲಿಯೂ ಲಭ್ಯವಿರುತ್ತದೆ. ಉಳಿದಂತೆ ಧಾರ್ಮಿಕ ಸ್ಥಳಗಳಗಳಾದ ಖತುಶ್ಯಾಮ್ ಜಿ, ಸಲಾಸರ್ ಹನುಮಾನ್ ದೇವಸ್ಥಾನ ಮತ್ತು ಪುಷ್ಕರ್‌ಗೆ ಭೇಟಿ ನೀಡಲು ಹೆಲಿಕಾಪ್ಟರ್ ಸೇವೆ ಕಲ್ಪಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ಆರ್‌ಟಿಡಿಸಿ ಹೇಳಿದೆ.
ರಣಥಂಬೋರ್ ಮತ್ತು ಘಾನಾ ಪಕ್ಷಿಧಾಮ (ಭರತ್‌ಪುರ) ಸೇರಿದಂತೆ ಇತರ ಪ್ರವಾಸಿ ಸ್ಥಳಗಳಲ್ಲಿ ಹೆಲಿಕಾಪ್ಟರ್ ಜಾಯ್ ರೈಡ್‌ಗಳನ್ನು ಪ್ರಾರಂಭಿಸಲಾಗುತ್ತದೆ. ಚಂಬಲ್‌ನಲ್ಲಿ ಕ್ರೂಸ್ ಪ್ರವಾಸೋದ್ಯಮವನ್ನು ಪ್ರಾರಂಭಿಸುವ ಆಲೋಚನೆಯೂ ಇದೆ ಎಂದು ಆರ್‌ಟಿಡಿಸಿ ಅಧ್ಯಕ್ಷ ಧರ್ಮೇಂದ್ರ ರಾಥೋಡ್ ಹೇಳಿದ್ದಾರೆ.
ಜೈಸಲ್ಮೇರ್ ಮತ್ತು ಅಜ್ಮೀರ್‌ನಲ್ಲಿ ಹೆಲಿಕಾಪ್ಟರ್ ಜಾಯ್ ರೈಡ್‌ಗಳನ್ನು ಪ್ರಾರಂಭಿಸಿದೆ. ‘ಇಲ್ಲಿಗೆ ಬರುವ ಪ್ರವಾಸಿಗರಿಂದ ನಮಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ’ ಎಂದು ಆರ್‌ಟಿಡಿಸಿ ತಿಳಿಸಿದೆ.
‘ರಾಜಸ್ಥಾನದ ದಿನ’ವನ್ನು ಆಚರಿಸುವ ಸಲುವಾಗಿ ಮಾರ್ಚ್ 28ರಿಂದ ಮೂರು ದಿನಗಳ ಕಾಲ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಖ್ಯಾತ ಕಲಾವಿದರು ತಮ್ಮ ಪ್ರದರ್ಶನ ನೀಡಲಿದ್ದಾರೆ. ಇದರಿಂದ ಸ್ಥಳೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದಲ್ಲದೆ ಕಲಾವಿದರಿಗೆ ವೇದಿಕೆಯನ್ನು ಒದಗಿಸುತ್ತದೆ.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಕೂಡ ಭಾಗವಹಿಸಲಿದ್ದಾರೆ ಎಂದು ರಾಥೋಡ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.