ADVERTISEMENT

Jharkhand Election Results | ಸೊರೇನ್‌ ದಂಪತಿ ಛಲ: ಜೆಎಂಎಂಗೆ ಗೆಲುವಿನ ಫಲ

ಪಿಟಿಐ
Published 23 ನವೆಂಬರ್ 2024, 21:28 IST
Last Updated 23 ನವೆಂಬರ್ 2024, 21:28 IST
ಹೇಮಂತ್‌ ಸೊರೇನ್‌ ಹಾಗೂ ಕಲ್ಪನಾ ಸೊರೇನ್‌
ಹೇಮಂತ್‌ ಸೊರೇನ್‌ ಹಾಗೂ ಕಲ್ಪನಾ ಸೊರೇನ್‌   

ರಾಂಚಿ: ಜಾರ್ಖಂಡ್‌ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಹೇಮಂತ್‌ ಸೊರೇನ್‌ ದಂಪತಿ ಜೆಎಂಎಂ ಪಕ್ಷವನ್ನು ಗೆಲುವಿನ ದಡ ಮುಟ್ಟಿಸುವ ಮೂಲಕ ತಮ್ಮ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ‘ಇಂಡಿಯಾ’ ಮೈತ್ರಿಕೂಟದ ಭಾಗವಾದ ಜೆಎಂಎಂ ಸತತ ಎರಡನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಮಾಡಿದ್ದಾರೆ.

ಚುನಾವಣೆ ಪ್ರಚಾರದ ವೇಳೆ, ಜೆಎಂಎಂ ಮುಖ್ಯಸ್ಥ ಹೇಮಂತ್ ಸೊರೇನ್ ಹಾಗೂ ಪತ್ನಿ ಕಲ್ಪನಾ ಸೊರೇನ್‌ ಅವರನ್ನು ವಿರೋಧ ಪಕ್ಷ ಬಿಜೆಪಿಯು ‘ಬಂಟಿ ಔರ್‌ ಬಬ್ಲಿ’ ಎಂದು ಮೂದಲಿಸುತ್ತಿತ್ತು. ಕಲ್ಪನಾ ಅವರನ್ನು ‘ಹೆಲಿಕಾಪ್ಟರ್‌ ಮೇಡಂ’ ಎಂದು ಟೀಕಿಸುವ ಮೂಲಕ ಅವರು ಗಂಡೆ ವಿಧಾನಸಭಾ ಕ್ಷೇತ್ರಕ್ಕೆ ಹೊರಗಿನಿಂದ ಬಂದವರು ಎಂದು ಕೂಡ ವಾಗ್ದಾಳಿ ನಡೆಸಿತ್ತು. ಅದನ್ನು ಸೊರೇನ್‌ ದಂಪತಿ ಮೆಟ್ಟಿ ನಿಂತಿದ್ದಾರೆ.

ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇತ್ತು. ಅದರ ಲಾಭ ಪಡೆದು, ಸರ್ಕಾರ ರಚನೆಗೆ ಅಗತ್ಯವಿರುವಷ್ಟು ಸ್ಥಾನಗಳನ್ನು ಗೆಲ್ಲುವಲ್ಲಿ ಬಿಜೆಪಿ ವಿಫಲವಾಗಿದೆ.

ADVERTISEMENT

ಹೇಮಂತ್ ಸೊರೇನ್‌ ಅವರು ಬರ್ಹೈತ್ ಕ್ಷೇತ್ರದಿಂದ, ಪತ್ನಿ ಕಲ್ಪನಾ ಸೊರೇನ್‌ ಅವರು ಗಂಡೆ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ತಮಗೆ ಎದುರಾಗಿದ್ದ ಸವಾಲುಗಳನ್ನು ಮೆಟ್ಟಿನಿಂತ ಸೊರೇನ್‌ ದಂಪತಿ, ಪಕ್ಷವನ್ನು ಗೆಲುವಿನ ದಡ ಮುಟ್ಟಿಸಿದ್ದಾರೆ.

ಭೂ ಹಗರಣದ ಜೊತೆ ನಂಟಿನ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಜನವರಿ 31ರಂದು ಹೇಮಂತ್‌ ಸೊರೇನ್‌ ಅವರನ್ನು ಬಂಧಿಸಿತ್ತು.

ಈ ಸಂಗತಿಯನ್ನೇ ಕಲ್ಪನಾ ಅವರು ಸವಾಲಾಗಿ ಸ್ವೀಕರಿಸಿದರು. ಪತಿಯ ಬಂಧನವಾದ ನಂತರ ಪಕ್ಷ ಸಂಘಟನೆಗೆ ಧುಮುಕಿದರು. ವಿಧಾನಸಭೆಗೆ ಚುನಾವಣೆ ಘೋಷಣೆಯಾದ ನಂತರ ರಾಜ್ಯದಲ್ಲಿ 200ರಷ್ಟು ರ‍್ಯಾಲಿಗಳನ್ನು ಆಯೋಜಿಸಿದ ಸೊರೇನ್‌ ದಂಪತಿ, ಪಕ್ಷದ ಪರವಾಗಿ ಅನುಕಂಪದ ಅಲೆ ಸೃಷ್ಟಿಯಾಗುವಂತೆ ಹಾಗೂ ಬುಡಕಟ್ಟು ಸಮುದಾಯದ ಮತಗಳು ಹಂಚಿಹೋಗದಂತೆ ನೋಡಿಕೊಂಡಿದ್ದಾರೆ.

ಹೇಮಂತ್‌ ಅವರು ಜೈಲಿನಿಂದ ಬಿಡುಗಡೆಗೊಂಡ ನಂತರ ಕಂಡುಬಂದ ರಾಜಕೀಯ ಬೆಳವಣಿಗೆಗಳಲ್ಲಿ, ನಾಯಕರಾದ ಚಂಪೈ ಸೊರೇನ್‌, ಸೀತಾ ಸೊರೇನ್‌ ಹಾಗೂ ಲೊಬಿನ್‌ ಹೆಮ್‌ಬ್ರೊಮ್‌ ಅವರು ಜೆಎಂಎಂ ತೊರೆದು, ಬಿಜೆಪಿ ಸೇರಿದರು. ಶಾಸಕರಾದ ನಳಿನ್ ಸೊರೇನ್‌ ಹಾಗೂ ಜೋಬಾ ಮಾಝಿ ಅವರು ಲೋಕಸಭೆಗೆ ಆಯ್ಕೆಯಾದರು. ಈ ಬೆಳವಣಿಗೆಗಳು ಒಡ್ಡಿದ್ದ ಸವಾಲನ್ನು ಕೂಡ ಸೊರೇನ್‌ ದಂಪತಿ ಮೆಟ್ಟಿ ನಿಂತು, ಗೆಲುವಿನ ನಗೆ ಬೀರಿದ್ದಾರೆ.

ನೀಡಿದ್ದ ಭರವಸೆಗಳು: ಜೆಎಂಎಂ ಮುಖಂಡರು ಹಲವಾರು ಕಲ್ಯಾಣ ಕಾರ್ಯಕ್ರಮಗಳ ಕುರಿತು ಪ್ರಚಾರದ ವೇಳೆ ಭರವಸೆ ನೀಡಿದ್ದರು. ವಿರೋಧ ಪಕ್ಷಗಳ ನಾಯಕರನ್ನು ಹಣಿಯಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇ.ಡಿ ಮತ್ತು ಸಿಬಿಐಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂಬ ಆರೋಪ ಮಾಡಿದರು. 

‘ನನ್ನ ವಿರುದ್ಧ ದುರುದ್ದೇಶಪೂರಿತ ಪ್ರಚಾರ ನಡೆಸುವುದಕ್ಕಾಗಿ ಬಿಜೆಪಿ ₹500 ಕೋಟಿಗೂ ಹೆಚ್ಚು ಹಣ ಖರ್ಚು ಮಾಡುತ್ತಿದೆ’ ಎಂದು ಹೇಮಂತ್‌ ಸೊರೇನ್‌ ಆರೋಪಿಸಿದ್ದರು. ಈ ಎಲ್ಲ ಅಂಶಗಳು ಜಾರ್ಖಂಡ್‌ ಮತದಾರರು ಜೆಎಂಎಂ ಪರ ವಾಲುವಂತೆ ಮಾಡಿರುವಂತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎನ್‌ಡಿಎ ಘಟಾನುಘಟಿ ನಾಯಕರು ಪ್ರಚಾರ ನಡೆಸಿದ್ದರು. ಜೆಎಂಎಂ ನೇತೃತ್ವದ ಮೈತ್ರಿಕೂಟದ ವಿರುದ್ಧ ಭ್ರಷ್ಟಾಚಾರ, ನುಸುಳುಕೋರರಿಗೆ ನೆರವು ನೀಡುತ್ತಿರುವ ಆರೋಪ ಮಾಡಿದ್ದರು.

ಹೇಮಂತ್‌ ಸೊರೇನ್‌ ಜೈಲಿನಿಂದ ಬಿಡುಗಡೆಗೊಂಡ ನಂತರ, ಚಂಪೈ ಸೊರೇನ್‌ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದನ್ನೇ ಬಿಜೆಪಿ ಪಾಳಯ ಪ್ರಚಾರದ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿತ್ತು. ಚಂಪೈ ಅವರಂತಹ ಬುಡಕಟ್ಟು ನಾಯಕನಿಗೆ ಹೇಗೆ ಅವಮಾನ ಮಾಡಲಾಗಿದೆ ಎಂಬುದನ್ನೇ ಪ್ರಮುಖ ವಿಷಯವನ್ನಾಗಿ ಮಾಡಿತ್ತು.

ಹಲವು ಭರವಸೆ: ಪ್ರಚಾರದ ವರಸೆ

ಜೆಎಂಎಂ ಮುಖಂಡರು ಹಲವಾರು ಕಲ್ಯಾಣ ಕಾರ್ಯಕ್ರಮಗಳ ಕುರಿತು ಪ್ರಚಾರದ ವೇಳೆ ಭರವಸೆ ನೀಡಿದ್ದರು. ವಿರೋಧ ಪಕ್ಷಗಳ ನಾಯಕರನ್ನು ಹಣಿಯಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇ.ಡಿ ಮತ್ತು ಸಿಬಿಐಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂಬ ಆರೋಪ ಮಾಡಿದರು. 

‘ನನ್ನ ವಿರುದ್ಧ ದುರುದ್ದೇಶಪೂರಿತ ಪ್ರಚಾರ ನಡೆಸುವುದಕ್ಕಾಗಿ ಬಿಜೆಪಿ ₹500 ಕೋಟಿಗೂ ಹೆಚ್ಚು ಹಣ ಖರ್ಚು ಮಾಡುತ್ತಿದೆ’ ಎಂದು ಹೇಮಂತ್‌ ಸೊರೇನ್‌ ಆರೋಪಿಸಿದ್ದರು. ಈ ಎಲ್ಲ ಅಂಶಗಳು ಜಾರ್ಖಂಡ್‌ ಮತದಾರರು ಜೆಎಂಎಂ ಪರ ವಾಲುವಂತೆ ಮಾಡಿರುವಂತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎನ್‌ಡಿಎ ಘಟಾನುಘಟಿ ನಾಯಕರು ಪ್ರಚಾರ ನಡೆಸಿದ್ದರು. ಜೆಎಂಎಂ ನೇತೃತ್ವದ ಮೈತ್ರಿಕೂಟದ ವಿರುದ್ಧ ಭ್ರಷ್ಟಾಚಾರ, ನುಸುಳುಕೋರರಿಗೆ ನೆರವು ನೀಡುತ್ತಿರುವ ಆರೋಪ ಮಾಡಿದ್ದರು.

ಹೇಮಂತ್‌ ಸೊರೇನ್‌ ಜೈಲಿನಿಂದ ಬಿಡುಗಡೆಗೊಂಡ ನಂತರ, ಚಂಪೈ ಸೊರೇನ್‌ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದನ್ನೇ ಬಿಜೆಪಿ ಪಾಳಯ ಪ್ರಚಾರದ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿತ್ತು. ಚಂಪೈ ಅವರಂತಹ ಬುಡಕಟ್ಟು ನಾಯಕನಿಗೆ ಹೇಗೆ ಅವಮಾನ ಮಾಡಲಾಗಿದೆ ಎಂಬುದನ್ನೇ ಪ್ರಮುಖ ವಿಷಯವನ್ನಾಗಿ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.