ರಾಂಚಿ: ಹೇಮಂತ್ ಸೊರೇನ್ ನೇತೃತ್ವದ ಜಾರ್ಖಂಡ್ ಸರ್ಕಾರವನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಜಾರ್ಖಂಡ್‌ನಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ. ಅಕ್ರಮ ಮರಳುಗಾರಿಕೆಯನ್ನು ಪ್ರಸ್ತಾಪಿಸಿದ ಅವರು, ಭಾರಿ ಪ್ರಮಾಣದ ಹಣವನ್ನು ವಶಪಡಿಸಿಕೊಂಡ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಜೆಎಂಎಂ ಮತ್ತು ಕಾಂಗ್ರೆಸ್ ಮೈತ್ರಿಕೂಟ ಜನರನ್ನು ಲೂಟಿ ಮಾಡುತ್ತಿದೆ ಎಂದು ದೂರಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
‘ಸೊರೇನ್ ಸರ್ಕಾರವು ಜಾರ್ಖಂಡ್ ಅನ್ನು ಲೂಟಿ ಮಾಡುತ್ತಿದೆ. ಇಲ್ಲಿ ನಾವು ಸರ್ಕಾರ ರಚಿಸಿದ ಬಳಿಕ ಈ ಭಷ್ಟರಿಗೆ ಕಠಿಣ ಶಿಕ್ಷೆಯಾಗಲು ನ್ಯಾಯಾಲಯದಲ್ಲಿ ಹೋರಾಡುತ್ತೇವೆ ಎಂದು ಭರವಸೆ ನೀಡುತ್ತೇನೆ. ನಿಮ್ಮಿಂದ ಬಂದಿರುವ ಹಣವನ್ನು ನಿಮಗಾಗಿ ಮತ್ತು ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಖರ್ಚು ಮಾಡುತ್ತೇವೆ’ಎಂದು ಮೋದಿ ಹೇಳಿದ್ದಾರೆ.
ಜೆಎಂಎಂ ನಾಯಕರು ಅಕ್ರಮ ಮರಳುಗಾರಿಕೆಯಿಂದ ಕೋಟಿಗಟ್ಟಲೇ ಹಣ ಸಂಪಾದಿಸುತ್ತಿದ್ದಾರೆ. ಬೆಟ್ಟದಂತೆ ರಾಶಿ ಹಾಕಿದ್ದ ಹಣ ವಶಕ್ಕೆ ಪಡೆಯಲಾಗಿದೆ. ಈ ಕಂತೆ ಕಂತೆ ನೋಟುಗಳು ಎಲ್ಲಿಂದ ಬಂದವು? ಇದು ನಿಮ್ಮ ಹಣ ಅಲ್ಲವೇ? ಇದು ನಿಮ್ಮಿಂದ ಲೂಟಿ ಮಾಡಿದ ಹಣವಲ್ಲವೇ? ಎಂದಿದ್ಧಾರೆ.
ಕೇಂದ್ರದಲ್ಲಿ ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರದ ಬಗ್ಗೆಯೂ ಟೀಕೆ ಮಾಡಿದ ಮೋದಿ, 2004ರಿಂದ 2014ರವರೆಗೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಸೋನಿಯಾ ಗಾಂಧಿ ಮತ್ತು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ, 10 ವರ್ಷಗಳಲ್ಲಿ ಕೇವಲ ₹80,000 ಹಣವನ್ನು ಜಾರ್ಖಂಡ್‌ಗೆ ನೀಡಿತ್ತು. ಆದರೆ, ನಮ್ಮ ಸರ್ಕಾರ 10 ವರ್ಷಗಳಲ್ಲಿ ₹3 ಲಕ್ಷ ಕೋಟಿಗೂ ಅಧಿಕ ಅನುದಾನ ನೀಡಿದೆ ಎಂದು ಹೇಳಿದ್ದಾರೆ.
ಜಾರ್ಖಂಡ್‌ನ ಬೊಕರೊದಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ನೇಮಕಾತಿ ಮಾಫಿಯಾ ಬಗ್ಗೆ ಪ್ರಸ್ತಾಪಿಸಿದರು.
ನವೆಂಬರ್ 13 ಮತ್ತು ನವೆಂಬರ್ 20ರಂದು ಎರಡು ಹಂತಗಳಲ್ಲಿ ಜಾರ್ಖಂಡ್ ವಿಧಾನಸಭೆ ಚುನಾವಣೆ ನಡೆಯಲಿದ್ದು, ನವೆಂಬರ್ 23ರಂದು ಫಲಿತಾಂಶ ಹೊರಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.